

ಮೈಸೂರು: ಅಧ್ಯಾತ್ಮವನ್ನು ಕೇವಲ ಮೇಲ್ನೋಟಕ್ಕೆ ನೋಡಿದರೆ ಸಾಲದು, ಆಳಕ್ಕೆ ಇಳಿಯಬೇಕು. ಆಗ ಮಾತ್ರ ಶ್ರೀ ಸಿದ್ಧೇಶ್ವರ ಸ್ವಾಮೀಜಿಯಂತೆ ಬದುಕಲು ಸಾಧ್ಯ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಡಾ.ಎಸ್.ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿದ್ಧೇಶ್ವರ ಶ್ರೀಗಳು ಒಬ್ಬ ಆಧ್ಯಾತ್ಮಿಕದ ಮಹಾಹಿಮಾಲಯ ಮತ್ತು ಮಹಾನ್ ಚೇತನ. ಅವರ ಚಿಂತನೆ, ಮಾತುಗಳನ್ನು ಮೆಲುಕು ಹಾಕಿ ಧನ್ಯತೆಯಲ್ಲಿ ತೇಲಬೇಕು. ಅವರ ವಿಚಾರ ಮೈಗೂಡಿಸಿಕೊಳ್ಳಬೇಕು ಎಂದರು.
ನಾನು ವಿದ್ಯಾರ್ಥಿಯಾಗಿದ್ದಾಲೇ ಶ್ರೀಗಳ ಅವರ ಪ್ರವಚನ ಕೇಳಿದ್ದೇನೆ. ಮಹಾನ್ ತಪಸ್ವಿ, ಸರಳ ಮೂರ್ತಿ, ಜ್ಞಾನಯೋಗಿಯಾಗಿದ್ದರು. ವೇದಗಳ ತಿರುಳನ್ನು ಜನರಿಗೆ ತಿಳಿಸಿ ತಲೆತೂಗುವಂತೆ ಮಾಡುತ್ತಿದ್ದರು. ಅನೇಕ ಸಂದರ್ಭದಲ್ಲಿ ಸರಳತೆಯನ್ನು ದಾರಿದ್ರ್ಯ ತಡೆಗೆ ಹೋಲಿಸಲಾಗುತ್ತದೆ. ಇದು ತಪ್ಪು ಕಲ್ಪನೆ. ಅದನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು ಎಂದರು.
ಬಸವಣ್ಣ ಮತ್ತು ವಿವೇಕಾನಂದರನ್ನು ಕೇವಲ ಸಮಾಜ ಸುಧಾರಕರು ಎಂದು ಅನೇಕರು ಚಿತ್ರಿಸಿದ್ದಾರೆ. ಆದರೆ, ಅವರ ಆಧ್ಯಾತ್ಮಿಕ ಕ್ರಾಂತಿಯನ್ನು ವಿದ್ಯಾರ್ಥಿಗಳಿಗೆ ಸರಿಯಾಗಿ ತಿಳಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಜ್ಞಾನದ ಗಣಿಯಾಗಿದ್ದ ಸಿದ್ಧೇಶ್ವರ ಶ್ರೀಗಳು ತತ್ವಜ್ಞಾನದ ಸಂಗಮದಂತೆ ಇದ್ದರು. ಹೀಗಾಗಿ, ಪರಿಣಾಮಕಾರಿಯಾಗಿ ಪ್ರವಚನ ನೀಡುತ್ತಿದ್ದರು. ‘ಯಾವುದನ್ನು ಶಾಶ್ವತವಾಗಿ ಇಟ್ಟಕೊಳ್ಳಬಾರದು, ಜ್ಞಾನದ ವಿಸ್ತಾರಕ್ಕೆ ಮನುಷ್ಯ ಯಾವಾಗಲೂ ತನ್ನನ್ನು ತೆರೆದುಕೊಳ್ಳಬೇಕು’ ಎಂದು ಅವರು ಯಾವಾಗಲೂ ಹೇಳುತ್ತಿದ್ದರು ಎಂದು ಸ್ಮರಿಸಿದರು.
ಪ್ರಭಾರ ಕುಲಪತಿ ಪ್ರೊ.ಎಸ್.ರಾಜಶೇಖರ್ ಮಾತನಾದರು.
ಶ್ರೀಗಳ ಸನ್ನಿಧಿಯಲ್ಲಿ ಜರುಗಿದ ಚಿಂತನೆ ಮಂಥನದಿಂದ ಸಂಗ್ರಹಿಸಿರುವ ‘ಗೃಹಬಳಕೆಯ ವಸ್ತುಗಳು; ಬದುಕಿಗೊಂದು ಆಧ್ಯಾತ್ಮಿಕ ನೋಟ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಮೈವಿವಿ ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್, ನಿವೃತ್ತ ಗ್ರಂಥಪಾಲಕ ಡಾ.ಸಿ.ಪಿ.ರಾಮಶೇಷ, ಸಂಯೋಜಕ ಪ್ರೊ.ಸುರೇಶ್ ಇತರರು ಪಾಲ್ಗೊಂಡಿದ್ದರು.