ಸಿದ್ಧಾರೂಢ ಮಠದಲ್ಲಿ ಸಪ್ತಪದಿ ಏ. 26ರಂದು

Siddharuda Mahadwara -2
Published on

ಹುಬ್ಬಳ್ಳಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಪ್ತಪದಿ-ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏಪ್ರಿಲ್ 26ರಂದು ಹುಬ್ಬಳ್ಳಿಯಲ್ಲಿ ಸಿದ್ಧಾರೂಢ ಮಠ ಹಾಗೂ ಧಾರವಾಡದಲ್ಲಿ ಸೋಮೇಶ್ವರ ದೇವಸ್ಥಾನದಲ್ಲಿ ನಡೆಸಲು ನಿರ್ಧರಿಸಲಾಯಿತು.

ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರ ಸೂಚಿಸಿರುವ ಇನ್ನೊಂದು ದಿನಾಂಕ ಮೇ 24ರ ಸನಿಹ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಏಪ್ರಿಲ್ 26 ಸೂಕ್ತವೆಂದು ನಿರ್ಧಾರಕ್ಕೆ ಬರಲಾಗಿದೆ.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸರ್ಕಾರ ಒಂದು ಒಳ್ಳೆಯ ಕಾರ್ಯಕ್ರಮ ತಂದಿದೆ. ಇದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ಧಾರ್ವಿುಕ ಪದ್ಧತಿ ಪ್ರಕಾರ ವಿವಾಹ ಕಾರ್ಯ ನಡೆಯಲಿದೆ. ಧಾರವಾಡ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲು, ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ನಡೆಯಲು ಎಲ್ಲರೂ ಸಹಕರಿಸಬೇಕು ಎಂದರು.

ತಹಸೀಲ್ದಾರ ಶಶಿಧರ ಮಾಡ್ಯಾಳ ಮಾತನಾಡಿ, ಧಾರ್ವಿುಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸುವಂತೆ ಸರ್ಕಾರ ಸೂಚಿಸಿದೆ. ಹುಬ್ಬಳ್ಳಿ ನಗರ ವ್ಯಾಪ್ತಿಯ 20 ದೇವಾಲಯಗಳಲ್ಲಿ ಸಿದ್ಧಾರೂಢ ಮಠ ಸೂಕ್ತವೆಂದು ಸಚಿವರು ಸೂಚಿಸಿದ್ದಾರೆ. ಪ್ರತಿ ಜೋಡಿಗೆ ಸರ್ಕಾರ 55 ಸಾವಿರ ರೂ. ಖರ್ಚು ಮಾಡಲಿದೆ. ಇದರಲ್ಲಿ 8 ಗ್ರಾಂ ಚಿನ್ನದ ಮಂಗಲಸೂತ್ರ, ವಧು-ವರರ ಬಟ್ಟೆಬರೆ ಸೇರಿವೆ. ಜತೆಗೆ ಪ್ರತಿ ಜೋಡಿಯ 100 ಜನ ಸಂಬಂಧಿಗಳಿಗೆ ಊಟದ ವ್ಯವಸ್ಥೆ ಮಾಡಲು ನಿರ್ದೇಶನವಿದೆ ಎಂದು ಸಭೆಗೆ ತಿಳಿಸಿದರು.

ವಧು-ವರರ ಹೆಸರು ನೋಂದಣಿಗೆ ಮಾರ್ಚ್ 27 ಕೊನೆಯ ದಿನವಾಗಿದೆ. ಬಳಿಕ ವಧು ವರರ ಯಾದಿ ಪ್ರಕಟಿಸಿ ಏಪ್ರಿಲ್ 8ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ ಮಾತನಾಡಿ, ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಂತರ್ಜಾತಿ ಹಾಗೂ ವಿಧವಾ ಮರು ವಿವಾಹಕ್ಕೆ ಇಲಾಖೆಯಿಂದ ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ವಿವರಿಸಿದರು. ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಮಾತನಾಡಿ, ನಗರದ ಪ್ರದೇಶದಲ್ಲಿ ಬಡವರ ಜೀವನ ಬಹಳ ಕ್ರೂರವಾಗಿ ಇರುತ್ತದೆ. ಬೆಳೆದು ನಿಂತ ಮಕ್ಕಳ ಮದುವೆ ಮಾಡಿಸುವುದು ಕಷ್ಟಕರವಾಗಿರುತ್ತದೆ. ಸರ್ಕಾರ ಒಂದು ಒಳ್ಳೆಯ ಯೋಜನೆ ತಂದಿದೆ. ಬಡವರು, ಕೊಳಗೇರಿ ನಿವಾಸಿಗಳು ಪ್ರಯೋಜನ ಪಡೆಯುವಂತೆ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಮೇಯರ್​ಗಳಾದ ಡಿ.ಕೆ. ಚವ್ಹಾಣ, ಶಿವು ಹಿರೇಮಠ, ಮಂಜುಳಾ ಅಕ್ಕೂರ, ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ, ರಂಗಾ ಬದ್ದಿ, ಸಂತೋಷ ಚವ್ಹಾಣ, ಕೃಷ್ಣ ಗಂಡಗಾಳೇಕರ, ರವಿ ನಾಯ್ಕ, ಇನ್ನಿತರರು ಇದ್ದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net