ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಉತ್ಸವ

Siddharudha
Published on

ಹುಬ್ಬಳ್ಳಿ : ಶಿವರಾತ್ರಿ ಅಂಗವಾಗಿ ಇಲ್ಲಿನ ಶ್ರೀ ಸಿದ್ಧಾರೂಢ ಮಠದಲ್ಲಿ ಫೆ. 13 ರಿಂದ 21ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 19ರಂದು ಸಂಜೆ 5.30ಕ್ಕೆ ರಥೋತ್ಸವ ಜರುಗಲಿದೆ.

ಶುಕ್ರವಾರದಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಚೇರ್ಮನ್ ಧರಣೇಂದ್ರ ಜವಳಿ, 18ರಂದು ಶ್ರೀಗಳ ಪಾಲಕಿಯುವ ವಾದ್ಯ ಮೇಳದೊಂದಿಗೆ ನಗರದಲ್ಲಿ ಸಂಚರಿಸಲಿದೆ. ರಾತ್ರಿ ಶ್ರೀಮಠದಲ್ಲಿ ಅಹೋರಾತ್ರಿ ಜಾಗರಣೆ ನಡೆಯಲಿದೆ. 21ರಂದು ಸಂಜೆ 6 ಗಂಟೆಗೆ ಕೌದಿ ಪೂಜೆ ಜರುಗಲಿದ್ದು, ನಂತರ ಉತ್ಸವ ಸಮಾಪ್ತಿಗೊಳ್ಳಲಿದೆ ಎಂದು ಹೇಳಿದರು.

13 ರಿಂದ 18ರವರೆಗೆ ನಿತ್ಯ ರಾತ್ರಿ 8 ಗಂಟೆಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರಸಿದ್ಧ ಸಂಗೀತಗಾರರಿಂದ ಸಂಗೀತೋತ್ಸವ ನಡೆಯಲಿದೆ. 13ರಂದು ಮಧ್ಯಾಹ್ನ 4 ಗಂಟೆಗೆ ಶ್ರೀಮಠದ ಹತ್ತಿ ಮತ್ತೂರ ದಾಸೋಹ ಭವನದಲ್ಲಿ ಪೋಷಕರ, ಆಶ್ರಯದಾತರ, ಆಜೀವ ಸದಸ್ಯರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ವಿಜಯಪುರದ ಕಟ್ಟಿಮನಿ ಪ್ರತಿಷ್ಠಾನದ ಸಹಯೋಗದೊಂದಿಗೆ ಶ್ರೀ ಸಿದ್ಧಾರೂಢರ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಸಲು ನಿರ್ಧರಿಸಲಾಗಿದೆ. ಸಿದ್ಧಾರೂಢರ ಬಗ್ಗೆ ಪಿಎಚ್​ಡಿ ಮಾಡಲು ಬಯಸಿದವರನ್ನು ಕರೆಯಿಸಿ, ಮಾಹಿತಿ ಸಂಗ್ರಹಿಸಲಾಗುವುದು. ಸಿದ್ಧಾರೂಢರ ತತ್ವಗಳನ್ನು ಪ್ರಚಾರಗೊಳಿಸುವ ಉದ್ದೇಶದಿಂದ ಹೊರ ರಾಜ್ಯಗಳಲ್ಲಿ ಪ್ರವಚನ ಆಯೋಜಿಸಲು ತೀರ್ವನಿಸಲಾಗಿದೆ ಎಂದು ಹೇಳಿದರು.

ಶ್ರೀಮಠದ ಆವರಣದಲ್ಲಿ ಗ್ರಂಥಾಲಯ ನಿರ್ವಿುಸಲು ನಿರ್ಧರಿಸಲಾಗಿದೆ. ಅಂಚಟಗೇರಿ ಬಳಿ ನಿಸರ್ಗ ಚಿಕಿತ್ಸಾಲಯ ಮತ್ತು ಯೋಗ ಶಿಬಿರ ಆಯೋಜಿಸಲಾಗುವುದು. ಅದ್ವೈತ ಸಿದ್ಧಾಂತದ ಗ್ರಂಥಾಲಯ ಪ್ರಾರಂಭಿಸಲು ಸಹ ತೀರ್ವನಿಸಲಾಗಿದೆ. ಶ್ರೀಮಠಕ್ಕೆ ರಾಜ್ಯ ಸರ್ಕಾರ 1 ಕೋಟಿ ರೂ. ಮಂಜೂರು ಮಾಡಿದ್ದು, ಅದರಲ್ಲಿ 50 ಲಕ್ಷ ರೂ. ಬಿಡುಗಡೆಗೊಳಿಸಿದೆ ಎಂದು ತಿಳಿಸಿದರು.

ಕಮೀಟಿ ವೈಸ್ ಚೇರ್ಮನ್ ಗೋವಿಂದ ಮಣ್ಣೂರ, ಗೌರವ ಕಾರ್ಯದರ್ಶಿ ಎಸ್.ಐ. ಕೋಳಕೂರ, ಧರ್ಮದರ್ಶಿ ಡಿ.ಡಿ. ಮಾಳಗಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net