ಸಿದ್ಧರ ಬೆಟ್ಟದಲ್ಲಿಂದು ಹನುಮ ಜಯಂತಿ, 5 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳ ಭೇಟಿ ನಿರೀಕ್ಷೆ ಜಗಮಗಿಸುವ ವಿದ್ಯುತ್ ದೀಪಾಲಂಕಾರ

15 dpt 3 siddarbetta alkuta
Published on

ದಾಬಸ್‌ಪೇಟೆ: ಐತಿಹಾಸಿಕ ನಿಜಗಲ್ ಸಿದ್ಧರ ಬೆಟ್ಟ ಧಾರ್ಮಿಕ ಭಾವೈಕ್ಯತೆಯ ತಾಣವಾಗಿದ್ದು, ಗುರುವಾರ (ಡಿ.16) ಅದ್ದೂರಿಯಾಗಿ ಹನುಮ ಜಯಂತಿ ಆಚರಿಸಲಾಗುತ್ತಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಮಕೃಷ್ಣಪ್ಪ ತಿಳಿಸಿದರು.

ನಿಜಗಲ್ಲು ಸಿದ್ಧರಬೆಟ್ಟ ಸೇವಾ ಸಮಿತಿ ಪ್ರತಿ ವರ್ಷದಂತೆ ಜಯಂತಿಗೆ ಸಿದ್ಧತೆ ಮಾಡಿದೆ. ಐದು ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಬೆಟ್ಟಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿ ನಿರ್ದೇಶಕ ಶ್ರೀನಿವಾಸ ಮಾತನಾಡಿ, ಸಮಿತಿಗೆ ಸೇರ ಬಯಸುವವರಿಗೆ ಮುಕ್ತ ಅವಕಾಶವಿದೆ. ಇಲ್ಲಿನ ಹದಿನೆಂಟಕ್ಕೂ ಹೆಚ್ಚು ದೇವಾಲಯಗಳ ಅಭಿವೃದ್ಧಿ ಆಗಬೇಕಿದೆ. ಇಲ್ಲಿಯ ಶಾಸನಗಳನ್ನು ಓದಿಸಿ, ಅವುಗಳ ಆಧಾರದ ಮೇಲೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅರಣ್ಯ ಇಲಾಖೆ ಈ ಪ್ರದೇಶವನ್ನು ದೈವಿ ವನ, ದೇವರ ಕಾಡು ಎಂದು ಗುರುತಿಸಿ ಔಷಧ ಸಸ್ಯ ಬೆಳೆಸುವ ಕಾರ್ಯಕ್ಕೆ ಮುಂದಾಗಿದೆ. ಮುಂದೆ ಈ ಬೆಟ್ಟವು ಪ್ರವಾಸಿತಾಣವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸಲಿದೆ ಎಂದರು.

ಬಿಗಿ ಪೊಲೀಸ್ ವ್ಯವಸ್ಥೆ: ದಾಬಸ್‌ಪೇಟೆ ಸಬ್ ಇನ್‌ಸ್ಪೆಕ್ಟರ್ ಎಂ.ಎನ್.ಮುರಳಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಪಾದಯಾತ್ರೆ ಮಾರ್ಗದುದ್ದಕ್ಕೂ ಹಾಗೂ ಬೆಟ್ಟದ ಮೇಲಿರುವ ದರ್ಗಾಕ್ಕೂ ಬಂದೋಬಸ್ತ್ ಒದಗಿಸಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಒಂದು ಕೆಎಸ್‌ಆರ್‌ಪಿ ತಂಡ ನಿಯೋಜಿಸಲಾಗುತ್ತಿದೆ ಎಂದು ರಾಮಕೃಷ್ಣಪ್ಪ ಮಾಹಿತಿ ನೀಡಿದರು.

ತಾಲೂಕು ಬಿಜೆಪಿ ಉಪಾಧ್ಯಕ್ಷ ಜಗದೀಶ್ ಚೌಧರಿ ಅವರು ಲೇಸರ್ ಕಿರಣಗಳು ಮತ್ತು ಬಣ್ಣದ ದೀಪಲಂಕಾರ ಮಾಡಿಸಿ, 3,562 ಅಡಿ ಎತ್ತರದ ಬೆಟ್ಟವನ್ನು ಶೃಂಗರಿಸಿದ್ದಾರೆ ಎಂದು ತಿಳಿಸಿದರು. ಭಾರತಿಪುರದ ಮೋಹನ್ ಕುಮಾರ್ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಏರ್ಪಡಿಸಿರುವುದಾಗಿ ತಿಳಿಸಿದರು.

ಸಮಿತಿ ಅಧ್ಯಕ್ಷ ಅಗಳಕುಪ್ಪೆ ಕುಮಾರ್, ಖಜಾಂಚಿ ಶ್ರೀಕಾಂತ್, ಉಪಾಧ್ಯಕ್ಷ ಪುಟ್ಟೇಗೌಡ, ಮುಖಂಡರಾದ ಕುಮಾರ್, ನಟರಾಜು, ಶಿವರಾಜ್, ರಂಗನಾಥ್, ಮೋಹನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net