

ನೆಲಮಂಗಲ: ರಾಜ್ಯದಲ್ಲಿ ಹಿಂದು ಮುಸ್ಲಿಂ ದೇವರು ಒಂದೇ ಕಡೆ ನೆಲೆಸಿರುವ ಏಕೈಕ ಬೆಟ್ಟ ದಾಬಸ್‌ಪೇಟೆಯ ನಿಜಗಲ್ಲು ಸಿದ್ಧರಬೆಟ್ಟ. ಇದು ಭಾವೈಕ್ಯದ ಪ್ರತೀಕ ಎಂದು ಬಿಜೆಪಿ ತಾಲೂಕು ಉಪಾಧ್ಯಕ್ಷ ಜಗದೀಶ್ ಚೌಧರಿ ತಿಳಿಸಿದರು.
ನಗರದ ಚನ್ನಪ್ಪ ಬಡಾವಣೆಯ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಭಕ್ತರ ಪಾದಯಾತ್ರೆ ನಿಮಿತ್ತ ಆಯೋಜಿಸಿದ್ದ ಹನುಮ ಮಾಲೆ ಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹನುಮ ಜಯಂತಿ ಪ್ರಯುಕ್ತ ಹಾಗೂ ನಿಜಗಲ್ಲು ಸಿದ್ಧರಬೆಟ್ಟವನ್ನು ಪ್ರವಾಸಿ ತಾಣವಾಗಿ ಪರಿವರ್ತಿಸುವ ಉದ್ದೇಶದಿಂದ ಪಕ್ಷಾತೀತವಾಗಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ತಾಲೂಕಿನಾದ್ಯಂತ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಹಿಂದು ಸಂಸ್ಕೃತಿಯಲ್ಲಿ ಹಲವು ಆಚರಣೆಗಳಿವೆ. ಈ ಅಂಶವನ್ನು ಯುವ ಸಮುದಾಯಕ್ಕೆ ಇದನ್ನು ಅರ್ಥ ಮಾಡಿಸಿಕೊಡಬೇಕು ಎಂದು ಹೇಳಿದರು.
ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಸಿದ್ಧರಬೆಟ್ಟವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬೆಟ್ಟದ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಭಕ್ತರು ಕಾಶಿ, ತಿರುಪತಿ, ಶಬರಿಮಲೆ ಸೇರಿ ವಿವಿಧ ಧಾರ್ಮಿಕ ಕೇಂದ್ರಗಳಿಗೆ ನೂರಾರು ಕಿಮೀ ಪಾದಯಾತ್ರೆ ಮಾಡುತ್ತಾರೆ. ತಾಲೂಕಿಗೆ ಕೇವಲ 25 ಕಿಮೀ ದೂರವಿರುವ ಧಾರ್ಮಿಕ ಕೇಂದ್ರಕ್ಕೆ ಪ್ರತಿಯೊಬ್ಬರೂ ಜಾತ್ಯತೀತವಾಗಿ, ಪಕ್ಷಾತೀತವಾಗಿ ಪಾದಯಾತ್ರೆ ಕೈಗೊಳ್ಳಬೇಕು ಎಂದರು.
ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ: ನೆಲಮಂಗಲದಿಂದ ಗುರುವಾರ (ಡಿ.16) 500ಕ್ಕೂ ಹೆಚ್ಚು ಮಂದಿ ದಾಬಸ್‌ಪೇಟೆ ಬಳಿಯ ಸಿದ್ಧರಬೆಟ್ಟಕ್ಕೆ ಹನುಮ ಜಯಂತಿ ಪ್ರಯುಕ್ತ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಪಾದಯಾತ್ರೆಗೆ ಚಾಲನೆ ನೀಡುವರು. ರಾ.ಹೆದ್ದಾರಿ 48ರಲ್ಲಿ ಬರುವ ಪ್ರತಿ ಗ್ರಾಮದ ಜನರು ಅಂಜನೇಯಸ್ವಾಮಿ ದೇವರಿಗೆ ಪೂಜೆ ಪುಷ್ಪನಮನ ಸಲ್ಲಿಸಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು. ನಿಜಗಲ್ಲು ಸಿದ್ಧರಬೆಟ್ಟ ತಲುಪಿ ವಿಶೇಷ ಪೂಜೆ ಸಲ್ಲಿಸಿ ಮಾಲೆಯನ್ನು ವಿಸರ್ಜಿಸುವರು. ಅದೇ ದಿನ ಸಂಜೆ 5.30ಕ್ಕೆ ವೆೇದಿಕೆ ಕಾರ್ಯಕ್ರಮ ಏರ್ಪಾಡಾಗಿದೆ. ತಾಲೂಕಿನ ವಿವಿಧ ಮಠಾಧೀಶರು ಭಾಗವಹಿಸುವರು. ರಾತ್ರಿ 10ಗಂಟೆಗೆ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಏರ್ಪಾಡಾಗಿದೆ ಎಂದು ಕಾರ್ಯಕ್ರಮ ಆಯೋಜಕ ಎಂ.ಎನ್. ರಾಮ್ ತಿಳಿಸಿದರು.
ಬಜರಂಗದಳದ ಗ್ರಾಮಾಂತರ ಜಿಲ್ಲಾ ಸಹಸಂಯೋಜಕ ಬಿ.ಎಸ್. ಶಶಿಕಿರಣ್, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಜಯ್‌ಕುಮಾರ್, ಕಾರ್ಯದರ್ಶಿ ಅರಣ್‌ಕುಮಾರ್ ಮತ್ತಿತರರು ಇದ್ದರು.