ಸಿದ್ಧತೆ ಪರಿಶೀಲಿಸಿದ ಶಾಸಕ ಬೆಲ್ಲದ

11 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದಲ್ಲಿ ಜ. 12ರಿಂದ ನಡೆಯಲಿರುವ 26ನೇ ರಾಷ್ಟ್ರೀಯ ಯುವ ಸಮ್ಮೇಳನದ ಅಂತಿಮ ಹಂತದ ಸಿದ್ಧತೆಗಳನ್ನು ಶಾಸಕ ಅರವಿಂದ ಬೆಲ್ಲದ ಬುಧವಾರ ವೀಕ್ಷಣೆ ಮಾಡಿದರು.
ಕೆಸಿಡಿ ಮೈದಾನದಲ್ಲಿ ನಿರ್ಮಾಣ ಮಾಡುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ವೇದಿಕೆ, ಯುವಕೃತಿ ಸ್ಟಾಲ್ ಸೇರಿ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾರ್ಯಕ್ರಮ ಸಂದರ್ಭದಲ್ಲಿ ಧ್ವನಿ, ಬೆಳಕು, ಆಸನಗಳು ಸೇರಿ ಯಾವುದೇ ಸಮಸ್ಯೆ ಆಗದಂತೆ ಎಲ್ಲ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವ ಜನೋತ್ಸವದ ಸಕಲ ಸಿದ್ಧತೆ ಭರದಿಂದ ಸಾಗಿದೆ. ಧಾರವಾಡ ಇತಿಹಾಸದಲ್ಲಿ ಹಿಂದೆಂದೂ ಕಾಣದಷ್ಟು ವೈಭವದಿಂದ ಶೃಂಗಾರಗೊಂಡಿದೆ. ಕೆಸಿಡಿ ಆವರಣದಲ್ಲಿ ಸುಮಾರು 20 ಸಾವಿರ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಯುವ ಜನೋತ್ಸವದಲ್ಲಿ ದೇಶದ ವಿವಿಧ ರಾಜ್ಯಗಳಿಂದ 7500 ಯುವಕರು ಆಗಮಿಸಲಿದ್ದಾರೆ. ಎಲ್ಲ ರಾಜ್ಯಗಳ ಮಕ್ಕಳು ತಮ್ಮ ಭಾಗದ ಸಂಸ್ಕೃತಿ, ಊಟ, ಕ್ರೀಡೆಗಳನ್ನು ಪ್ರದರ್ಶಿಸುವುದರ ಜತೆಗೆ ತಮ್ಮ ಭಾಗದ ಸಂಸ್ಕೃತಿಗಳನ್ನು ಇತರ ರಾಜ್ಯಗಳ ಯುವಕರೊಂದಿಗೆ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದರು.
ಅನ್ಯ ರಾಜ್ಯಗಳಿಂದ ಆಗಮಿಸುವ ಯುವಕರಿಗೆ ಧಾರವಾಡ ಪರಿಚಯ ಮಾಡಿಸಲು ಎಲ್ಲ ತಯಾರಿ ನಡೆದಿದೆ. ಆತಿಥ್ಯಕ್ಕೆ ಸಹ ಸೂಕ್ತ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಜ. 12ರಂದು ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ಸುಮಾರು 30 ಸಾವಿರ ಯುವಕರು ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆಯಲ್ಲಿ ಪ್ರಧಾನಮಂತ್ರಿ ಕಚೇರಿ ಶಿಷ್ಟಾಚಾರ ಪ್ರಕಾರ ಅವಕಾಶ ನೀಡಲಿದ್ದಾರೆ. ಎಲ್ಲ ಪಕ್ಷದ ಎಲ್ಲ ಶಾಸಕರು ವೇದಿಕೆಯಲ್ಲಿ ಇರಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net