ಸಿದ್ಧಗಂಗೆಯಲ್ಲಿ ದನಗಳ ಜಾತ್ರೆಯ ಮೆರುಗು ; ಎರಡು ವರ್ಷಗಳ ನಂತರ ಆಯೋಜನೆ ; ವಹಿವಾಟು ಭರಾಟೆ ಬಲು ಜೋರು

19TMK_Siddagange_jatre_3
Published on

ತುಮಕೂರು : ಇತಿಹಾಸ ಪ್ರಸಿದ್ಧ ಸಿದ್ಧಗಂಗಾ ಜಾತ್ರೆಯ ವಿಶೇಷ ಎನಿಸಿರುವ ದನಗಳ ಜಾತ್ರೆ ಆರಂಭವಾಗಿದೆ. ಕಳೆದೆರಡು ವರ್ಷ ಕರೊನಾ ಸೋಂಕಿನ ಕಾರಣಕ್ಕೆ ಕಳೆಗುಂದಿದ್ದ ಜಾತ್ರೆಗೆ ಈ ವರ್ಷ ಮೆರುಗು ಬಂದಿದೆ. ಮಠದ ಆವರಣದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಸಿಂಗಾರಗೊಂಡ ರಾಸುಗಳು, ತುಂಬಿ ತುಳುಕುತ್ತಿರುವ ರೈತರು, ಮಠದ ಆವರಣದಲ್ಲಿ ಓಡಾಡುವುದೇ ಖುಷಿ ನೀಡುತ್ತಿದೆ.

ಶ್ರೀಮಠದ ರಾಗಿ ಹೊಲದಲ್ಲಿ ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಜಾನುವಾರು, ಜನರೇ ಕಾಣಿಸುತ್ತಿದ್ದ ಜಾತ್ರೆಯಲ್ಲಿ ತರವೇಹಾರಿ ರೀತಿಯಲ್ಲಿ ಸಿಂಗಾರಗೊಂಡಿದ್ದ ರಾಸುಗಳು, ನವನವೀನ ಅಲಂಕಾರದೊಂದಿಗೆ ಗಾಂಭೀರ್ಯದ ನಡಿಗೆಯಲ್ಲಿ ಹೆಜ್ಜೆ ಹಾಕುತ್ತಿವೆ.

ರಾಜ್ಯದಲ್ಲಿಯೇ ಪ್ರಖ್ಯಾತವಾದ ದನಗಳ ಜಾತ್ರೆಯಲ್ಲಿ ನಾಡಿನ ವಿವಿಧ ಭಾಗದಿಂದ ಬಂದಿರುವ ದೃಢಕಾಯದ ಅತ್ಯುತ್ತಮ ರಾಸುಗಳಿಗೆ ಬಹುಮಾನ ಕೂಡ ನೀಡಲಾಗುತ್ತಿದೆ.

ಉತ್ತಮ ರಾಸುಗಳ ಆಯ್ಕೆಗೆ ಎತ್ತುಗಳ ಪರೇಡ್ ಕೂಡ ನಡೆಯಲಿದೆ. ಈ ಸಂದರ್ಭದಲ್ಲಿ ಪಶುವೈದ್ಯರು, ತಜ್ಞರು, ಜಾತ್ರೆ ಸಮಿತಿ ಸದಸ್ಯರು ಹಾಜರಿದ್ದು ಎತ್ತುಗಳನ್ನು ಪರಿಶೀಲಿಸಿದ್ದಾರೆ. ಪ್ರತಿವರ್ಷ ಪ್ರದರ್ಶನದ ಸಮಯದಲ್ಲಿ ಖುದ್ದು ಹಾಜರಿದ್ದು ಖುಷಿಪಡುತ್ತಿದ್ದ ಡಾ. ಶಿವಕುಮಾರ ಸ್ವಾಮೀಜಿ ಅವರ ಅನುಪಸ್ಥಿತಿ ಜಾತ್ರೆಯಲ್ಲಿ ಕಾಡುತ್ತಿದೆ.

ಹಳ್ಳಿಕಾರ್, ಅಮೃತ್‌ಮಹಲ್, ಕಿಲಾರಿ, ಗಿಡ್ಡಹೋರಿ, ನಾಟಿ ಹಸು, ಹಲ್ಲು ಮೂಡದ ಹೋರಿಗಳು, ಎರಡು, ನಾಲ್ಕು, ಆರು, ಎಂಟು ಹಲ್ಲುಗಳು ಸೇರಿ ವಿವಿಧ ದೇಸಿ ತಳಿಗಳು ಜಾತ್ರೆಯಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕೆ ಆಗಮಿಸಿವೆ. ಕನಿಷ್ಠ 15 ಸಾವಿರ ಬೆಲೆಯಿಂದ ಗರಿಷ್ಠ 5.5 ಲಕ್ಷ ರೂ. ವರೆಗೂ ಹೋರಿಗಳು ಜಾತ್ರೆಯಲ್ಲಿವೆ. 2 ಲಕ್ಷ ರೂ. ಮೇಲ್ಪಟ್ಟು ಮೌಲ್ಯದ 80ಕ್ಕೂ ಹೆಚ್ಚು ಜೋಡಿ ಎತ್ತುಗಳು ರ‌್ಯಾಂಪ್ ಮೇಲೆ ಹೆಜ್ಜೆಹಾಕಲಿವೆ. ಬುಧವಾರ (ಫೆ.23) ಎತ್ತುಗಳ ಪರಿಷೆ, ದನಗಳ ಪ್ರದರ್ಶನ ಮತ್ತು ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಇರುತ್ತದೆ. ಉತ್ತಮ ರಾಸುಗಳ ಆಯ್ಕೆಗೆ ಎತ್ತುಗಳ ಪರೇಡ್ ನಡೆಯಲಿದ್ದು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸುತ್ತಾರೆ. ಪಶುವೈದ್ಯರು, ತಜ್ಞರು, ಜಾತ್ರೆ ಸಮಿತಿ ಸದಸ್ಯರು ಹಾಜರಿದ್ದು ಎತ್ತುಗಳನ್ನು ಪರಿಶೀಲಿಸಲಿದ್ದಾರೆ.

ಆರಂಭ (ವ್ಯವಸಾಯ) ಮಾಡುವ ಹೋರಿಗಳೆಂದರೆ ರೈತರಿಗೆ ಮನೆಯ ಮಕ್ಕಳಂತೆಯೇ. ಸಿದ್ಧಗಂಗೆ ಜಾತ್ರೆಯಲ್ಲಿ ನೆರೆದಿರುವ ಹೋರಿಗಳು ಇಂದಿನ ಯಾವ ಟ್ರ್ಯಾಕ್ಟರ್‌ಗಳಿಗಿಂತಲೂ ಕಡಿಮೆಯಾಗಿಲ್ಲ. ಇಂಥ ರಾಸುಗಳನ್ನು ನೋಡುವುದೇ ನಮಗೆ ಹಬ್ಬ. ನಾರಾಯಣಪ್ಪ, ನೆಲಮಂಗಲ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net