ಸಿದ್ಧಗಂಗೆಯ ಸಿದ್ಧಪುರುಷ ಶಿವಕುಮಾರ ಶ್ರೀಗಳು

22 01
Published on

ಮೇಘಾಲಯ ರಾಜ್ಯಪಾಲ ಸಿ.ಎಚ್​.ವಿಜಯಶಂಕರ್​ ಬಣ್ಣನೆ, ಮಹಾಶಿವಯೋಗಿಗಳ 6ನೇ ಪುಣ್ಯಸಂಸ್ಮರಣೋತ್ಸವ

ತುಮಕೂರು: ಅನ್ನ, ಅಕ್ಷರ, ಕಾಯಕದ ಸಂಗಮ ಸಿದ್ಧಗಂಗೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್​.ವಿಜಯಶಂಕರ್​ ಬಣ್ಣಿಸಿದರು.

ಸಿದ್ಧಗಂಗಾ ಮಠದ ಗೋಸಲಸಿದ್ದೇಶ್ವರ ವೇದಿಕೆಯಲ್ಲಿ ಮಂಗಳವಾರ ತ್ರಿವಿಧ ದಾಸೋಹಿ, ಕರ್ನಾಟಕರತ್ನ ಡಾ.ಶ್ರೀ ಶಿವಕುಮಾರ ಮಹಾಶಿವಯೋಗಿಗಳ 6ನೇ ಪುಣ್ಯಸಂಸ್ಮರಣೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಉರಿವ ಜ್ಯೋತಿಯಾಗಿ ಜನಮನವ ಬೆಳಗಿದ ಶಿವಕುಮಾರ ಶ್ರೀಗಳು, ಕಾಯಕ, ದಾಸೋಹದ ಮೂಲಕ ನಾಡಿನ ಜನರ ವಿಶ್ವಾಸ ಗೆದ್ದ ದೈವೀ ಪುರುಷ, ಯುಗ ಪುರುಷ, ಸಿದ್ದಗಂಗೆಯ ಸಿದ್ಧಪುರುಷರು ಎಂದರು.

ಜಾತಿ, ವರ್ಗ, ವರ್ಣರಹಿತ ಅಲ್ಲದೆ, ಧರ್ಮವನ್ನು ಮೀರಿ ಎಲ್ಲರಿಗೂ ಆಶ್ರಯವನ್ನು ಸಿದ್ಧಗಂಗಾ ಮಠವು ಆಶ್ರಯವನ್ನು ಕೊಟ್ಟಿದೆ. ಇಂತಹ ಮಠವು ನಾಡಿನಲ್ಲಿ ಇನ್ನೊಂದಿಲ್ಲ. ಕಾಯಕ, ದಾಸೋಹ ಶರಣರ ತತ್ವಾದರ್ಶಗಳನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದಿದ್ದ ಶಿವಕುಮಾರ ಶ್ರೀಗಳು ನುಡಿದಂತೆ ನಡೆದ ಮಹಾಶಿವಯೋಗಿಗಳು ಎಂದು ಸ್ಮರಿಸಿದರು. ದೇವರು ಎಂದಿಗೂ ಹೋರಾಟಗಾರರನ್ನ, ಪ್ರಯತ್ನಶಿಲರನ್ನು ಎಂದಿಗೂ ಕೈಬಿಡುವುದಿಲ್ಲ. ಅದೃಷ್ಟ ಹೇಡಿಗಳನ್ನು ಹುಡುಕಿಕೊಂಡು ಹೋಗುವುದಿಲ್ಲ. ಪರಿಶ್ರಮ, ಶಿಸ್ತುಬದ್ಧ ಜೀವನಕ್ಕೆ ಉದಾಹರಣೆಯಂತಿದ್ದರು ಸಿದ್ಧಗಂಗಾಶ್ರೀಗಳು. ಒಂದು ಮಠವನ್ನು ಸಮಾಜಮುಖಿಯಾಗಿ ಕಟ್ಟಿಬೆಳೆಸಿ ವಿಶ್ವದಲ್ಲೇ ಮಾದರಿಯಾಗಿ ನಿಂತ ಶ್ರೀಗಳು, ತಮ್ಮನ್ನೇ ಸೇವೆಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡ ಅಪರೂಪದ ಶಕ್ತಿ, ವ್ಯಕ್ತಿತ್ವ ಎಂದರು.

ಮನುಕುಲದ ಸಾರ್ಥಕ ಬದುಕಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಅವರು ದುಡಿದು ತಿನ್ನಬೇಕೆಂಬ ತತ್ವವನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರಿಗೂ ಆದರ್ಶಪ್ರಾಯ ವಾಗಿದ್ದರು. ಅನ್ನ ಪ್ರಸಾದ, ಅಕ್ಷರ ಪ್ರಸಾದ ಇಲ್ಲವೆಂದು ಯಾವೊಬ್ಬ ವ್ಯಕ್ತಿಯೂ ಮಠದಿಂದ ಹಿಂದಿರುಗಿದ ಉದಾಹರಣೆ ಇಲ್ಲ. ಮಠದ ಆಶ್ರಯ ಪಡೆದು ಉನ್ನತ ಸ್ಥಾನಕ್ಕೆ ತಲುಪಿರುವ ಹಳೆಯ ವಿದ್ಯಾರ್ಥಿಗಳು ಜಗತ್ತಿನ ಎಲ್ಲಾ ಮೂಲೆಯಲ್ಲು ಇದ್ದಾರೆ. ಹಳೆಯ ವಿದ್ಯಾರ್ಥಿಗಳು ಮಠವನ್ನು ಸ್ಮರಿಸದ ದಿನಗಳಿಲ್ಲ. ಶುದ್ಧ ಬದುಕನ್ನು ಬದುಕಿ ಸಿದ್ಧ ಪುರುಷರಾಗಿ ಸಾರ್ಥಕ ಜೀವನವನ್ನು ನಡೆಸಿದ ಶ್ರೀಗಳ ವ್ಯಕ್ತಿತ್ವಕ್ಕೆ ಯಾರೂ ಸಾಟಿಯಿಲ್ಲವೆಂದು ವಿಜಯಶಂಕರ್​ ಬಣ್ಣಿಸಿದರು. ಶಿಕ್ಷಣವನ್ನು ಸಮಾಜದ ಬದಲಾವಣೆಯ ಪ್ರಮುಖ ಸಾಧನವೆಂದು ಪರಿಗಣಿಸಿ ಶಿವಕುಮಾರ ಶ್ರೀಗಳು ಶಾಲಾ&ಕಾಲೇಜು, ಇಂಜಿನಿಯ ರಿಂಗ್​ ಮತ್ತು ವೈದ್ಯಕಿಯ ಕಾಲೇಜುಗಳ ನ್ನೊಳಗೊಂಡಂತೆ 125ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಜಾತಿ, ಧರ್ಮ ಅಥವಾ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಶಿಕ್ಷಣವನ್ನು ನೀಡುತ್ತಿರುವುದು ಶಿವಕುಮಾರ ಶ್ರೀಗಳ ಸೇವೆಗೆ ಹಿಡಿದ ಕನ್ನಡಿ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್​.ವಿಜಯಶಂಕರ್​ ಹೇಳಿದರು.

ಲಕ್ಷಾಂತರ ಬಡ ಮತ್ತು ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ಜತೆಗೆ ಆಶ್ರಯ ಒದಗಿಸಲಾಗಿದೆ. ಪ್ರಸ್ತುತ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ದೂರದೃಷ್ಟಿ, ಸದ್ಭಾವನೆಯಿಂದ ಮಠದ ಶ್ರೇಷ್ಠ ಪರಂಪರೆ, ಸಂಪ್ರದಾಯವನ್ನು ಮುನ್ನಡೆಸುತ್ತಿದ್ದಾರೆ. ಶ್ರೀ ಮಠದ ಸೇವಾ ಮನೋಭಾವ ಮತ್ತು ಕೀರ್ತಿಯನ್ನು ವಿಶ್ವದೆಲ್ಲಡೆ ಪಸರಿಸುತ್ತಿದ್ದಾರೆ ಎಂದು ಪ್ರಶಂಸಿದರು.

ತಾವು ರಾಜ್ಯದ ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಮಗುವಿಗೊಂದು ಮರ-ಶಾಲೆಗೊಂದು ವನ ಎಂಬ ವಿನೂತನ ಕಾರ್ಯಕ್ರಮವನ್ನು ಶ್ರೀಗಳ ಆಶೀರ್ವಾದದಿಂದ ಈ ಮಠದಿಂದಲೇ ಚಾಲನೆ ನೀಡಿ ರಾಜ್ಯದ ಅರಣ್ಯ ಪ್ರದೇಶಗಳ ಅಭಿವೃದ್ಧಿಗೆ ಮುನ್ನುಡಿ ಹಾಡಲಾಗಿತ್ತು ಎಂದು ಸ್ಮರಿಸಿದರು.

ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ನೇತೃತ್ವವಹಿಸಿದ್ದರು. ಮೈಸೂರಿನ ಸುತ್ತೂರುಮಠದ ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಶ್ರವಣಬೆಳಗೊಳ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್​, ಮಾಜಿ ಸಚಿವ ಸೊಗಡುಶಿವಣ್ಣ, ಡಿಸಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net