ಸಿದ್ಧಗಂಗೆಯ ಮಹಾರಥೋತ್ಸವ ಸಂಪನ್ನ;ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿದ್ದಲಿಂಗೇಶ್ವರ ಸ್ವಾಮಿ ಮೆರವಣಿಗೆ

DSC_5915
Published on

ತುಮಕೂರು: ಸಿದ್ಧಗಂಗೆಯ ಆರಾಧ್ಯ ದೈವ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ಬುಧವಾರ ವೈಭವಯುತವಾಗಿ ಜರುಗಿತು. ನಾಡಿನೆಲ್ಲೆಡೆಯಿಂದ ಹರಿದುಬಂದಿದ್ದ ಭಕ್ತ ಸಾಗರ ಸ್ವಾಮಿಯ ದರ್ಶನ ಪಡೆದು ಪುನೀತವಾಯಿತು.

ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ರಥದ ಗಾಲಿಗೆ ತೆಂಗಿನಕಾಯಿ ಒಡೆದು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಬೆಳಗ್ಗೆ 11.50ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್, ತಹಸೀಲ್ದಾರ್ ಜಿ.ವಿ.ಮೋಹನ್‌ಕುಮಾರ್ ಹಾಗೂ ವಿವಿಧ ಮಠಾಧೀಶರು ಸೇರಿ ಅನೇಕ ಗಣ್ಯರು, ಭಕ್ತರು ಪಾಲ್ಗೊಂಡು ರಥ ಎಳೆದರು.

ಸ್ವಾಮಿಗೆ ರಾಜೋಪಚಾರ: ರಥೋತ್ಸವಕ್ಕೂ ಮುನ್ನ ರಥಕ್ಕೆ ಗಣಪತಿ ಪೂಜೆ, ಪುಣ್ಯಾಹ ಸೇರಿ ವಿವಿಧ ಧಾರ್ಮಿಕ ಪೂಜೆ ಸಲ್ಲಿಸಿ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥಕ್ಕೆ ಕೂರಿಸಿ ರಾಜೋಪಚಾರ ಹಾಗೂ ಅಷ್ಟೋತ್ತರ ನೆರವೇರಿಸಲಾಯಿತು. ರಥವನ್ನು ವಸ್ತ್ರಾಲಂಕಾರ, ಸುವರ್ಣ ಕಲಶಗಳಿಂದ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಯಿತು.

ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿ ವಿವಿಧ ಜಾನಪದ ಕಲಾ ತಂಡಗಳು ಮೆರುಗು ತಂದವಲ್ಲದೆ, ನೆರೆದಿದ್ದ ಭಕ್ತ ಸಮೂಹವನ್ನು ಆಕರ್ಷಿಸಿದವು.ಶಿವರಾತ್ರಿ ಜಾಗರಣೆಗಾಗಿ ನಾಡಿನ ಸಹಸ್ರಾರು ಭಕ್ತರು ಹಿಂದಿನ ರಾತ್ರಿಯೇ ಶ್ರೀಮಠಕ್ಕೆ ಆಗಮಿಸಿದ್ದರು. ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು. ಶ್ರೀ ಕ್ಷೇತ್ರದ ಶಾಲೆ, ವಸತಿ ನಿಲಯಗಳ ಕಟ್ಟಡ ಮೇಲೆ ನಿಂತು ಭಕ್ತರು ರಥೋತ್ಸವ ವೀಕ್ಷಿಸಿದ ದೃಶ್ಯ ಕಂಡುಬಂತು. ರಥೋತ್ಸವದ ಪ್ರಯುಕ್ತ ಭಕ್ತರಿಗೆ ಹಲವು ಸಂಘ-ಸಂಸ್ಥೆಗಳಿಂದ ಪಾನಕ, ಮಜ್ಜಿಗೆ ವಿತರಿಸಲಾಯಿತು. ಭಕ್ತಾದಿಗಳಿಗೆ ವಿಶೇಷ ಪ್ರಸಾದ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net