ಸಿದ್ಧಗಂಗಾ ಶ್ರೀಗಳು ಮಾನವ ಜನಾಂಗಕ್ಕೆ ಆದರ್ಶ

03rajesh4
Published on

ಚಾಮರಾಜನಗರ: ತುಮಕೂರಿನ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಜನಪ್ರವಾದ ಕಾರ್ಯದಿಂದ ಮಾನವ ಜನಾಂಗಕ್ಕೆ ಆದರ್ಶವಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಬಿ.ಕೆ.ರವಿಕುಮಾರ್ ಹೇಳಿದರು.

ನಗರದ ಜಿಲ್ಲಾ ಕಸಾಪ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬುಧವಾರ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮಿಯವರ ಜಯಂತಿ ಹಾಗೂ ದಾಸೋಹ ದಿನದಲ್ಲಿ ಭಾಗವಹಿಸಿ ಮಾತನಾಡಿದರು.

ಶಿವಕುಮಾರ ಸ್ವಾಮೀಜಿ ಅವರು ಇಡೀ ಜೀವನವನ್ನು ಅಭಿವೃದ್ಧಿ ,ಶಿಕ್ಷಣ ,ದಾಸೋಹ, ವಸತಿಗಾಗಿ ಮೀಸಲಿಟ್ಟು ಲಕ್ಷಾಂತರ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಅಡಿಪಾಯ ಹಾಕಿದರು. ಧರ್ಮದ ನೆಲೆಗಟ್ಟಿನಲ್ಲಿ ಶ್ರೇಷ್ಠ ಬದುಕನ್ನು ನಡೆಸಿದವರು. ಅವರ ಸೇವಾ ಮನೋಭಾವ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದು ತಿಳಿಸಿದರು.

ಕಸಾಪ ಮಾಜಿ ಅಧ್ಯಕ್ಷ ನಾಗಮಲ್ಲಪ್ಪ ಮಾತನಾಡಿ, ಭಾರತೀಯ ಧರ್ಮದ ಸೇವೆ ಮತ್ತು ದಾಸೋಹಕ್ಕೆ ಮತ್ತೊಂದು ಹೆಸರು ಶಿವಕುಮಾರ ಸ್ವಾಮಿಯವರು. ಇಡೀ ನಾಡು ಅವರ ಸೇವೆಯನ್ನು ಸ್ಮರಿಸುವ ಮೂಲಕ ಮಾನವನ ಆತ್ಮ ಕಲ್ಯಾಣವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಯೋಗಾಪ್ರಕಾಶ್, ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ, ಚಾಮರಾಜನಗರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಸವಣ್ಣ , ಲಕ್ಷ್ಮಿ ನರಸಿಂಹ, ಸರಸ್ವತಿ, ಶಿವಲಿಂಗ ಮೂರ್ತಿ, ಬಿ.ಕೆ.ಆರಾಧ್ಯ, ಮಹದೇವಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net