ಸಿದ್ಧಗಂಗಾ ಮಠದ ಹೆಸರಲ್ಲಿ ನಕಲಿ ದೇಣಿಗೆ

Arunkumar Patil KODALAHANGARGA
Published on

ಕಲಬುರಗಿ: ತುಮಕೂರ ಜಿಲ್ಲೆಯ ಶ್ರೀ ಸಿದ್ಧಗಂಗಾ ಮಠದ ಹೆಸರು ಹೇಳಿ ಸುಳ್ಳು ದೇಣಿಗೆ ಸಂಗ್ರಹ ಮಾಡುತ್ತಿದ್ದು, ಶ್ರೀಮಠದ ಭಕ್ತರು, ಹಳೇ ವಿದ್ಯಾರ್ಥಿಗಳು, ಹಿತೈಷಿಗಳು ಮೋಸ ಹೋಗಬಾರದು ಎಂದು ಶ್ರೀ ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳ ಸಂಘದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ ತಿಳಿಸಿದರು.

ಶ್ರೀಮಠದಲ್ಲಿ ೧೦ ಸಾವಿರಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಆಶ್ರಯ ಪಡೆದು, ಪ್ರಾಥಮಿಕದಿಂದ ಉನ್ನತ ಪದವಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರ, ಹಳೇ ವಿದ್ಯಾರ್ಥಿಗಳು, ಹಿತೈಷಿಗಳ ಸಹಾಯ, ಸಹಕಾರದಿಂದ ಸಂಸ್ಥೆ ನಡೆಯುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಕೆಲವು ಕಿಡಿಗೇಡಿಗಳು ಮಠದ ಹಳೇ ವಿದ್ಯಾರ್ಥಿಗಳು ಎಂದು ಸುಳ್ಳು ಹೇಳಿ, ಮಠದಿಂದ ಬಂಜೇತನಕ್ಕೆ ಔಷಧ ವಿತರಣೆ ಮಾಡಲು ತಮ್ಮನ್ನು ನಿಯೋಜಿಸಿದ್ದಾರೆ ಎಂದು ಹೇಳುತ್ತ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇದು ಸುಳ್ಳಾಗಿದ್ದು, ಶ್ರೀಮಠದಿಂದ ಯಾವುದೇ ಔಷಧ ವಿತರಣೆ ನಡೆದಿಲ್ಲ, ದೇಣಿಗೆ ಸಂಗ್ರಹಕ್ಕೆ ಶ್ರೀಮಠದಿಂದ ಯಾವುದೇ ವ್ಯಕ್ತಿಗಳನ್ನು ನಿಯೋಜಿಸಿಲ್ಲ, ನೇಮಕವೂ ಮಾಡಿಲ್ಲ. ವಂಚಕರ ಮಾತಿಗೆ ಸಾರ್ವಜನಿಕರು ಮೋಸ ಹೋಗಬಾರದು ಎಂದು ಮನವಿ ಮಾಡಿದರು.

ಆಸಕ್ತರು ದೇಣಿಗೆ ಸಲ್ಲಿಸುವವರು ಮಠದ (ಶ್ರೀ ಸಿದ್ಧಲಿಂಗಸ್ವಾಮಿಗಳು ಖಾತೆ ಸಂಖ್ಯೆ ೭೪೧೨೦೧೦೦೦೦೨೦೧೫, ಐಎಫ್‌ಸಿಎಸ್ ಕೋಡ್: ಬಿಎಆರ್‌ಬಿ೦ವಿಜೆಟಿಯುಎಸ್‌ಐ) ಖಾತೆಗೆ ದೇಣಿಗೆ ನೇರವಾಗಿ ಸಲ್ಲಿಸಬೇಕು ಎಂದು ತಿಳಿಸಿದರು.

ಈಗಾಗಲೇ ಇಂತಹ ದುಷ್ಕೃತ್ಯದಲ್ಲಿ ತೊಡಗಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಮೋಸಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.

ಹಳೇ ವಿದ್ಯಾರ್ಥಿ ದೇವಿಂದ್ರಪ್ಪ ಆವಂಟಿ ಮಾತನಾಡಿ, ಜಾತಿ, ಧರ್ಮದ ಭೇದಭಾವವಿಲ್ಲದೆ ಸಿದ್ಧಗಂಗಾ ಮಠ ನಡೆದಿದೆ. ಎಂದಿಗೂ ಮಠವೂ ರಾಜ್ಯಾದ್ಯಂತ ದೇಣಿಗೆ ಎತ್ತಲು ಮುಂದಾಗಿಲ್ಲ. ಶ್ರೀಮಠದ ಲಕ್ಷಾಂತರ ಭಕ್ತರು ದೇಶವಿದೇಶದಲ್ಲೂ ಇದ್ದು, ಅವರು ಹೆಸರು ಹೇಳದೆ ದಾನ ಮಾಡುತ್ತಿದ್ದಾರೆ. ಅಂತಹ ಹಿತೈಷಿಗಳಿಂದ ಮಠದ ಅನ್ನ, ಜ್ಞಾನ ದಾಸೋಹ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಕಲ್ಯಾಣರಾವ ಪಾಟೀಲ್ ಮಳಖೇಡ, ಶ್ರೀಶೈಲ್ ಘೂಳಿ, ಚನ್ನಬಸಯ್ಯ ಗುರುವಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net