ಸಿದ್ಧಗಂಗಾ ಆಸ್ಪತ್ರೆಯಲ್ಲಿ ಯಶಸ್ವಿ ಕಿಡ್ನಿ ಕಸಿ ; ಜಿಲ್ಲೆಯಲ್ಲಿಯೇ ಪ್ರಥಮ ಪ್ರಯತ್ನ ; ರೋಗಿ ಚೇತರಿಕೆಯಾಗಿ ಬಿಡುಗಡೆ

SHRC KIDNEY TRANSPLANT NEWS
Published on

ತುಮಕೂರು : ನಗರದ ಸಿದ್ಧಗಂಗಾ ವೈದ್ಯಕೀಯ ಕಾಲೇಜಿನಲ್ಲಿ ಯಶಸ್ವಿ ಕಿಡ್ನಿ ಕಸಿ ನಡೆಸಿದ್ದು, ಜಿಲ್ಲೆಯಲ್ಲಿಯೇ ಪ್ರಥಮ ಪ್ರಯತ್ನ ಎನಿಸಿದೆ. ರೋಗಿ ಚೇತರಿಕೆಯಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.

ರಾಜಸ್ಥಾನ ಮೂಲದ 32 ವರ್ಷದ ಪ್ರಕಾಶ್ ಎಂಬುವವರು ಎರಡು ವರ್ಷಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ನಿತ್ರಾಣವಾಗಿದ್ದ ಅವರು 6 ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಕುಟುಂಬದವರು ಕಿಡ್ನಿ ಕಸಿಗೆ ಒಪ್ಪಿದ ನಂತರ ಕಿಡ್ನಿ ಸ್ಪೆಷಲಿಸ್ಟ್ ಡಾ.ಎಸ್.ಗಣೇಶ್‌ಪ್ರಸಾದ್ ನೇತೃತ್ವದ ತಂಡ ವಿವಿಧ ಪರೀಕ್ಷೆಗಳನ್ನು ನಡೆಸಿ ಕಳೆದ ವಾರ ಯಶಸ್ವಿ ಚಿಕಿತ್ಸೆ ನಡೆಸಿದೆ. ಕ್ರಿಯಾಟಿನ್ ಅಂಶವೂ ನಾರ್ಮಲ್ ಆಗಿದ್ದು ರೋಗಿ ಬಿಡುಗಡೆಯಾಗಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು, ಆಸ್ಪತ್ರೆ ಗ್ರಾಮೀಣ ಮಟ್ಟದಲ್ಲಿ ಜನರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಆರಂಭವಾಗಿದೆ. ಮೊಟ್ಟ ಮೊದಲ ಕಿಡ್ನಿ ಕಸಿ ಯಶಸ್ವಿಯಾಗಿ ಪೂರೈಸಿದ್ದು ಮತ್ತಷ್ಟು ರೋಗಿಗಳಿಗೆ ನೆರವಾಗಲು ಪ್ರೇರಣೆಯಾಗಿದೆ ಎಂದಿದ್ದಾರೆ.

ಸಿದ್ಧಗಂಗಾ ಆಸ್ಪತ್ರೆ ಕಿಡ್ನಿ ಸ್ಪೆಷಲಿಸ್ಟ್ ಡಾ.ಗಣೇಶ್ ಮಾತನಾಡಿ, ಬೆಂಗಳೂರು ಹೊರತುಪಡಿಸಿ ತುಮಕೂರು ಸುತ್ತಲಿನ ಯಾವ ಜಿಲ್ಲೆಗಳಲ್ಲಿಯೂ ಇಂತಹ ಕಿಡ್ನಿ ಕಸಿ ನಡೆದಿಲ್ಲ. ನಾವು ಯಶಸ್ವಿ ಕಸಿ ಮುಖಾಂತರ ಈ ಸಾಧನೆ ಮಾಡಿದ್ದು, ಡಯಾಲಿಸಿಸ್‌ನಿಂದ ನರಳುವ ರೋಗಿಗಳು ಆಸ್ಪತ್ರೆಯ ಸೌಲಭ್ಯ ಪಡೆಯಬೇಕು ಎಂದರು.

ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್, ಯೂರಾಲಜಿಸ್ಟ್ ಹಾಗೂ ಕಸಿ ತಜ್ಞ ಡಾ.ರಂಗೇಗೌಡ ಮಾತನಾಡಿದರು. ಸಿದ್ಧಗಂಗಾ ಆಸ್ಪತ್ರೆ ಸಿಇಒ ಡಾ.ಸಂಜೀವ್, ಕಸಿ ತಜ್ಞ ಡಾ.ನರಸಿಂಹಮೂರ್ತಿ, ಅನಸ್ತೇಶಿಯಾ ಹಾಗೂ ಐಸಿಯು ಸ್ಪೆಷಲಿಸ್ಟ್ ಡಾ.ಮಧು, ಡಾ.ಶಶಿಕಿರಣ್, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಟ್ರಾನ್ಸ್‌ಪ್ಲಾಂಟ್ ಕೋ ಆರ್ಡಿನೇಟರ್ ಕಾರ್ತಿಕ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net