

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀ ಸಿದ್ದೇಶ್ವರ ಸ್ವಾಮೀಜಿ ಬದುಕು ಮಾದರಿಯಾಗಿದೆ. ಶ್ರೀಗಳ ಪ್ರವಚನದಿಂದ ಸಮಾಜದ ಸಾಕಷ್ಟು ಜನರು ತಮ್ಮ ಬದುಕಿನ ಶೈಲಿ ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಅವರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಬದಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎ.ಎಸ್. ಪಾಶ್ಚಾಪುರೆ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ನುಡಿನಮನ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀಗಳು ಅಪಾರ ಪಾಂಡಿತ್ಯ ಹೊಂದಿದ್ದರು. 1993ರಿಂದ ಸ್ವಾಮೀಜಿ ಅವರೊಂದಿಗೆ ಒಡನಾಟ ಹೊಂದಿದ್ದರಿಂದ ಅವರಲ್ಲಿನ ಪಾಂಡಿತ್ಯ, ವ್ಯಕ್ತಿತ್ವ ಮಹತ್ವ ತಿಳಿದಿದೆ. ಅವರು ಪ್ರವಚನ ಆರಂಭಿಸಿದರೆ ಸಾಕು ಸಾವಿರಾರು ಜನರು ಇದ್ದರೂ ಶಾಂತರಾಗುತ್ತಿದ್ದರು. ಆಧ್ಯಾತ್ಮದಲ್ಲಿ ಸಾಕಷ್ಟು ಓದಿಕೊಂಡಿದ್ದ ಅವರು ಅದರಂತೆ ಬದುಕು ಸಾಗಿಸಿದ್ದಾರೆ ಎಂದರು.
ನಿವೃತ್ತ ನ್ಯಾಯಾಧೀಶ ಸದಾಶಿವ ಸುಲ್ತಾನಪುರೆ ಮಾತನಾಡಿ, ಸಿದ್ಧೇಶ್ವರ ಸ್ವಾಮೀಜಿ ಸಮಯಕ್ಕೆ ಮಹತ್ವ ನೀಡುತ್ತಿದ್ದರು. ಎಲ್ಲ ವಿಷಯಗಳನ್ನು ಓದಿಕೊಂಡಿದ್ದ ಅವರು ಉತ್ತಮ ಪಾಂಡಿತ್ಯ ಹೊಂದಿದ್ದರು. ಸರಳ ಭಾಷೆಯಲ್ಲಿ ಜನರಿಗೆ ಪ್ರವಚನ ಹೇಳುವ ಮೂಲಕ ಜನಪ್ರಿಯತೆ ಹೊಂದಿದ್ದರು. ನಾನು ವೃತ್ತಿಯಲ್ಲಿ ಇದ್ದಾಗಲೂ ಪ್ರತಿ ತಿಂಗಳು ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದೆ ಎಂದರು.
ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಇತರರು ನುಡಿನಮನ ಸಲ್ಲಿಸಿದರು. ಸಂಘದ ಪದಾಧಿಕಾರಿಗಳು, ಇತರರು ಇದ್ದರು.