

ಬೆಳಗಾವಿ: ಮುಖ್ಯಮಂತ್ರಿ ಆಗುವ ಸಾಮರ್ಥ್ಯ ನನಗೂ ಇದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಮಧ್ಯದ ಕದನದಲ್ಲಿ ನಾನೇಕೆ ಬರಲಿ? ಬರಬೇಕೆಂದಾಗ ನೇರವಾಗಿ ಬರುತ್ತೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ‘ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ. ಅವರಿಬ್ಬರ ಜಗಳದಲ್ಲಿ ಎಂ.ಬಿ. ಪಾಟೀಲ ಅವರಿಗೆ ಅವಕಾಶ ಸಿಗಬಹುದೇ’ ಎಂಬ ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಇಬ್ಬರ ಕದನದಲ್ಲಿ ನಾನೇಕೆ ಬರಲಿ, ಎಂ.ಬಿ. ಪಾಟೀಲ ಇಬ್ಬರ ಕದನದಾಗ ಬರುವಂಥವನಲ್ಲ. ಬರಬೇಕೆಂದಾಗ ನೇರವಾಗಿ ಬರುತ್ತೇನೆ. ವಿ ಆರ್ ನಾಟ್ ಸೆಕೆಂಡ್ ಕ್ಲಾಸ್ ಸಿಟಿಜನ್ಸ್ ಎಂದರು.
ಮುಖ್ಯಮಂತ್ರಿ ಯಾರಾಗಬೇಕು, ಯಾರಾಗುತ್ತಾರೆ ಎಂಬ ಪ್ರಶ್ನೆಗಳು ಮಾಧ್ಯಮದವರಿಗೇ ಹೆಚ್ಚಾಗಿ ಕಾಡುತ್ತಿವೆ. ಲಿಂಗಾಯತ ಸಮುದಾಯದವರೂ ಆಗಬಹುದು. ಒಕ್ಕಲಿಗ, ಮುಸ್ಲಿಂ, ಪರಿಶಿಷ್ಟ ಸೇರಿ ಯಾವ ಸಮುದಾಯದರೂ ಆಗಬಹುದು. ಇಂಥದ್ದೇ ಸಮಾಜದವರು ಆಗುತ್ತಾರೆ ಎಂದೇನೂ ಇಲ್ಲ. ಇಲ್ಲಿ ಯಾರು ಕೂಡ ಮೂಕ ಪ್ರೇಕ್ಷಕರಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಒಂದು ಮೈಲುಗಲ್ಲು. ಸಿದ್ದರಾಮಯ್ಯ ಅವರು ಗ್ರಾಮೀಣದಿಂದ ಬಂದವರು, ಅವರು ಪಕ್ಷಾತೀತ ನಾಯಕರು. ಲಿಂಗಾಯತ, ದಲಿತ, ನಾಯಕ, ಒಕ್ಕಲಿಗ ಸಮಾಜದವರೂ ಸಿಎಂ ಆಗಬೇಕು ಎಂದು ಬಯಸುತ್ತಾರೆ. ಪಕ್ಷ, ಶಾಸಕರು, ಹೈಕಮಾಂಡ್ ಬಯಸಿದರೆ ಸಿಎಂ ಆಗುತ್ತೇನೆ ಎಂದ ಅವರು, ಪಕ್ಷ ಬಿಟ್ಟ 17 ಜನ ಶಾಸಕರು ವಾಪಸ್ ಬರುವುದು, ಬಿಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನೇ ಹಾಕಲಿಲ್ಲ. ಈಶ್ವರಪ್ಪ ಅವರಿಗೆ ಕ್ಲೀನ್ ಚೀಟ್ ಸಿಕ್ಕಿದೆ. ನಾಳೆ ಅವರು ಮಂತ್ರಿ ಆಗುತ್ತಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ ಎಂದು ಆರೋಪಿಸಿದ ಅವರು, 2023ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಚಿವ ವಿನಯ ಕುಲಕರ್ಣಿ, ಶಾಸಕಿ ಅಂಜಲಿ ನಿಂಬಾಳ್ಕರ, ಮಾಜಿ ಶಾಸಕ ಫಿರೋಜ್ ಸೇಠ್, ವಿನಯ ನಾವಲಗಟ್ಟಿ ಇದ್ದರು.