

ಸಿದ್ದಾಪುರ: ಏಸು ಕ್ರಿಸ್ತರ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ಸಿದ್ದಾಪುರ ಸಂತ ಜೋಸೆಫ್‌ರ ದೇವಾಲಯದಲ್ಲಿ ಭಾನುವಾರ ರಾತ್ರಿ ಭಕ್ತಿ ಶೃದ್ಧೆ ಹಾಗೂ ಸಡಗರದಿಂದ ಆಚರಿಸಿದರು.
ಚರ್ಚ್‌ನ ಧರ್ಮಗುರು ಮೈಕಲ್‌ಮರಿ ಆಶೀರ್ವಚನ ನೀಡಿ, ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸಲಿ. ಸರ್ವರಿಗೂ ಭಗವಂತನು ಆರೋಗ್ಯವನ್ನು ಕರುಣಿಸಲಿ. ದೇವರ ಮಕ್ಕಳಾದ ನಾವು ಸದಾ ಅವರ ಸೇವೆಗೆ ಸಿದ್ಧರಿರಬೇಕು. ಪರಸ್ಪರ ಹೊಂದಾಣಿಕೆ, ಸಹಬಾಳ್ವೆಯಿಂದ ಜೀವನ ನಡೆಸಬೇಕು. ಜಗತ್ತಿನಲ್ಲಿ ಪ್ರೀತಿಯ ಕೊರತೆ ಇಂದು ಕಾಣುತ್ತಿದ್ದು, ಭಗವಂತನ ಸ್ಮರಣೆಯಿಂದ ಸರ್ವರಲ್ಲೂ ಪ್ರೀತಿಯನ್ನು ಹಂಚಬಹುದು. ದ್ವೇಷ, ಅಸೂಯೆಯನ್ನು ತ್ಯಜಿಸಿದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ಬೆಳೆಯಲು ಸಾಧ್ಯ ಎಂದರು.
ಮಧ್ಯರಾತ್ರಿ ಇಲ್ಲಿನ ಸಂತ ಜೋಸೆಫ್‌ರ ಚರ್ಚ್‌ನಲ್ಲಿ ವಿಶೇಷ ಬಲಿಪೂಜೆ ನಡೆಯಿತು. ಗೋದಲಿಯಲ್ಲಿ ಬಾಲಯೇಸುವಿನ ಪ್ರತಿಕೃತಿಯನ್ನಿರಿಸಿ ಪ್ರಾರ್ಥಿಸಲಾಯಿತು .ಕ್ರಿಸ್‌ಮಸ್ ಪ್ರಯುಕ್ತ ವಿಶೇಷ ಪ್ರಾರ್ಥನೆಗಳು ನಡೆದವು. ದನದ ಕೊಟ್ಟಿಗೆಯಲ್ಲಿ ಜನಿಸಿದ ಸಂಕೇತವಾಗಿ ಕ್ರೈಸ್ತರು ತಮ್ಮ ಮನೆಗಳಲ್ಲಿ ಕೊಟ್ಟಿಗೆಯನ್ನು ನಿರ್ಮಿಸಿ ಅದರಲ್ಲಿ ಬಾಲಯೇಸುವಿನ ಮೂರ್ತಿ ಮಲಗಿಸಿ ಪ್ರಾರ್ಥಿಸಿದರು. ಬಳಿಕ ಪರಸ್ಪರ ಕೇಕ್ ಹಂಚಿ ಸಂಭ್ರಮಿಸಿದರು.