

ತರೀಕೆರೆ: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಮಳೆ ಆರ್ಭಟ ಜೋರಾಗಿ ಸೋಮವಾರ ಬೆಳಗ್ಗೆವರೆಗೆ ನಿರಂತರವಾಗಿ ಸುರಿದಿದೆ. ಇದರಿಂದ ಕೆಲವೆಡೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಜಯಪುರ ಸಮೀಪದ ಕೊಗ್ರೆ, ಕೊಪ್ಪದ ಸಿಡಿಮನೆ ಸೇತುವೆಗಳು ಕುಸಿದಿವೆ. ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಹಳ್ಳದ ಸಿದ್ದಾಪುರ ಸೇತುವೆ ಮುಳುಗಡೆಯಾಗಿದ್ದು, ಗ್ರಾಮದ ಸಂಪರ್ಕ ಕಡಿತವಾಗಿದೆ.
ಚಿಕ್ಕಮಗಳೂರು ತಾಲೂಕು, ಬಾಳೆಹೊನ್ನೂರು ಸುತ್ತಮುತ್ತ ಮನೆಗಳು ಹಾನಿಗೀಡಾಗಿವೆ. ಜಿಲ್ಲಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜು.19ರಂದು ಅಂಗನವಾಡಿಗಳಿಗೆ ಡಿಸಿ ಕೆ.ಎನ್.ರಮೇಶ್ ರಜೆ ಘೊಷಿಸಿದ್ದಾರೆ.
ತರೀಕೆರೆ ತಾಲೂಕಿನೆಲ್ಲೆಡೆ ಮಳೆ ಆರ್ಭಟ ಮುಂದುವರಿದಿದ್ದು ಸೋಮವಾರ ಕೆಂಚಾಪುರ ಗೇಟ್ನಿಂದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿತ್ತು. ಬೆಳಗಿನ ಜಾವ 4ರಿಂದ ಆರಂಭವಾದ ಮಳೆ ಎಡೆಬಿಡದೆ ಸುರಿದಿದೆ. ಗದ್ದೆ, ಅಡಕೆ, ತೆಂಗಿನ ತೋಟಗಳು ಜಲಾವೃತಗೊಂಡಿವೆ. ಕಳೆದ 24 ಗಂಟೆ ಅವಧಿಯಲ್ಲಿ ಲಕ್ಕವಳ್ಳಿ 33, ತರೀಕೆರೆ 40.6, ಲಿಂಗದಹಳ್ಳಿ 25.8, ತಣಿಗೇಬೈಲು 25.4, ತ್ಯಾಗದಬಾಗಿ 33, ಉಡೇವಾ 17.5, ಹುಣಸಘಟ್ಟ 16, ರಂಗೇನಹಳ್ಳಿಯಲ್ಲಿ ಅತ್ಯಧಿಕ 41.8 ಮಿಮೀ ಮಳೆ ದಾಖಲಾಗಿದೆ.
ಕಲ್ಲತ್ತಿಗಿರಿ ಹಳ್ಳ ತುಂಬಿ ಹರಿದಿದ್ದು ಅಡ್ಡಲಾಗಿ ನಿರ್ವಿುಸಿರುವ ಸೇತುವೆ ಮುಳುಗಡೆಯಾಗಿ ಸಿದ್ದಾಪುರ, ತ್ಯಾಗದಬಾಗಿ ತಾಂಡಾ ಸಂಪರ್ಕ ಕಡಿತಗೊಂಡಿದೆ. ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವ ಜನ ಪರದಾಡುವಂತಾಯಿತು.