

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಸಿದ್ದಲಿಂಗೇಶ್ವರಸ್ವಾಮಿ ಹಾಗೂ ಬಸವೇಶ್ವರಸ್ವಾಮಿ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಸೋಮವಾರ ಮುಂಜಾನೆಯೇ ದೇಗುಲವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ದೇವರಿಗೆ ಅಭಿಷೇಕ, ಪುಷ್ಪಾರ್ಚನೆ, ಕುಂಕುಮಾರ್ಚನೆ, ಒಡವೆ-ವಸ್ತ್ರಗಳ ಅಲಂಕಾರದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಿದ್ದ ರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಜನಪದ ಕಲಾವಿದ ನಾಗಮಂಗಲದ ರುದ್ರೇಶ್ ತಂಡ ವೀರಭದ್ರ ಕುಣಿತ, ಮೆರವಣಿಗೆ ನಡೆಯಿತು. ಉತ್ಸವ ಗ್ರಾಮದ ಅಂಗಡಿ ಬೀದಿ, ಉಯ್ಯಲೆ ಕಂಬದ ಆವರಣ, ದೊಡ್ಡಬೀದಿ, ಚಿಕ್ಕಬೀದಿ, ಸಿದ್ದಲಿಂಗೇಶ್ವರ ಬೀದಿಗಳಲ್ಲಿ ಸಾಗಿತು. ಸಂಜೆ ಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಒಂದು 1001 ದೀಪಗಳನ್ನು ಬೆಳಗಿಸಲಾಯಿತು. ಬಳಿಕ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.