ಸಿದ್ದಲಿಂಗಪ್ಪ ಕಸಾಪ ನೂತನ ಸಾರಥಿ ; ಜಿಲ್ಲೆಯಲ್ಲಿ ಶೇ.51.97 ಮತದಾನ

21Tmk_Kasapa_Election
Published on

ತುಮಕೂರು: ತೀವ್ರ ಹಣಾಹಣಿಯಿಂದ ಕೂಡಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಕೆ.ಎಸ್.ಸಿದ್ದಲಿಂಗಪ್ಪ 2520 ಮತ ಪಡೆದು ಭರ್ಜರಿ ಜಯಗಳಿಸಿದರು.

ಅಬ್ಬರದ ಪ್ರಚಾರ ನಡೆಸಿದ್ದ ಸಿದ್ದಲಿಂಗಪ್ಪ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದರು. ಲೇಖಕಿ, ಮಹಿಳಾಪರ ಹೋರಾಟಗಾರ್ತಿ ಶೈಲಾನಾಗರಾಜ್ ತೀವ್ರ ಪೈಪೋಟಿ ನೀಡಿದರಾದರೂ ಅಂತಿಮವಾಗಿ 697 ಮತಗಳ ಅಂತರಿಂದ ಸಿದ್ದಲಿಂಗಪ್ಪ ಗೆಲುವಿನ ನಗೆಬೀರಿದರು. ಕಸಾಪ ಮಾಜಿ ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪ 961 ಮತಗಳನ್ನು ಪಡೆದು ಹೋರಾಟದಲ್ಲಿ ಹಿಂದೆಬಿದ್ದರು. ಯುವ ಸೇನಾನಿ, ತುರುವೇಕೆರೆ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್.ದೇವರಾಜು 899 ಮತ ಪಡೆದು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 38 ಮತಗಳು ತಿರಸ್ಕೃತಗೊಂಡಿದ್ದವು.

ಈ ಬಾರಿ 3 ವರ್ಷಗಳಿಂದ ಕಸಾಪ ಅವಧಿಯನ್ನು 5 ವರ್ಷಗಳ ಅವಧಿಗೆ ವಿಸ್ತರಿಸಿದ್ದರಿಂದ ರಂಗೇರಿದ್ದ ಕಸಾಪ ಚುನಾವಣೆಯಲ್ಲಿ 6509 ಮತಗಳು ಚಲಾವಣೆಯಾಗಿದ್ದವು. ಪುರುಷರು-5278 ಹಾಗೂ 1231 ಮಹಿಳೆಯರು ಹಕ್ಕು ಚಲಾಯಿಸಿದ್ದರು. ಜಿಲ್ಲೆಯ 17 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು ಒಟ್ಟಾರೆ ಶೇ.51.97 ಮತದಾನವಾಗಿತ್ತು. ಕಳೆದ ಬಾರಿ ಶೇ.51.1 ಮತದಾನವಾಗಿತ್ತು.

ಮತದಾನ ಭಾನುವಾರ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಮತದಾನ ನಡೆಯಿತು. ಸಂಜೆ 5ಕ್ಕೆ ಮತ ಎಣಿಕೆ ಆರಂಭವಾಗಿ 7.30ರ ಹೊತ್ತಿಗೆ ಸ್ಪಷ್ಟ ಚಿತ್ರಣ ಹೊರಬಿತ್ತು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೆ.ಎಸ್.ಸಿದ್ದಲಿಂಗಪ್ಪ, ಶೈಲಾನಾಗರಾಜ್, ಪ್ರೊ.ಡಿ.ಚಂದ್ರಪ್ಪ, ಎಸ್.ದೇವರಾಜ್, ಆರ್.ವಿ.ಪುಟ್ಟಕಾಮಣ್ಣ ಹಾಗೂ ಎ.ಸಿ.ಮಹದೇವಪ್ಪ ಚುನಾವಣಾ ಕಣದಲ್ಲಿದ್ದರು. ಏಕೈಕ ಮಹಿಳಾ ಅಭ್ಯರ್ಥಿಯಾಗಿ ಕಣದಲ್ಲಿದ್ದ ಶೈಲಾನಾಗರಾಜ್ ಪರ ಮಹಿಳಾ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಬೆಂಬಲಕ್ಕೆ ನಿಂತಿದ್ದವು. ಎಂಎಲ್ಸಿ ಚುನಾವಣೆ ನಡೆಸುವಲ್ಲಿ ಎತ್ತಿದ ಕೈ ಎನಿಸಿರುವ ವೈಎಎನ್ ಬಳಗದ ನೆರವಿನಲ್ಲಿ ಚುನಾವಣೆ ಮಾಡಿದ್ದ ಸಿದ್ದಲಿಂಗಪ್ಪ ಎಲ್ಲಾ ತಾಲೂಕುಗಳಲ್ಲಿ ಮತದಾರರ ಮನಗೆದ್ದಿರುವುದು ಗಮನಾರ್ಹವೆನಿಸಿದೆ.

ಲ್ಲರನ್ನೂ ಸಹಮತಕ್ಕೆ ತೆಗೆದುಕೊಂಡು ಕನ್ನಡದ ಕೆಲಸ ಮಾಡುವೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದವರು ಸೇರಿ ಎಲ್ಲರೂ ಕನ್ನಡ ಕೆಲಸಗಾರರು, ಕನ್ನಡ ಸೈನಿಕರು. ಕನ್ನಡ ಕಟ್ಟುವ ಕೆಲಸದಲ್ಲಿ ಎಲ್ಲರನ್ನೂ ಒಗ್ಗೂಡಿ ತೆಗೆದುಕೊಂಡು ಹೋಗುವೆ. ನನ್ನ ಜಯಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕೆ.ಎಸ್.ಸಿದ್ದಲಿಂಗಪ್ಪ ಕಸಾಪ ನೂತನ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net