ಸಿದ್ದಲಿಂಗಪುರದಲ್ಲಿ ಷಷ್ಠಿ ಸಂಭ್ರಮ

mysore
Published on

ಮೈಸೂರು: ನಗರದ ಹೊರವಲಯದ ಸಿದ್ದಲಿಂಗಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ

ಹಬ್ಬವನ್ನು ಭಕ್ತರು ಶನಿವಾರ ಸಡಗರದಿಂದ ಆಚರಿಸಿದರು. ಸುಬ್ರಹ್ಮಣ್ಯೇಶ್ವರಸ್ವಾಮಿ ಜಾತ್ರೆ ಹಾಗೂ ರಥೋತ್ಸವವೂ ವಿಜೃಂಭಣೆಯಿಂದ ನೆರವೇರಿತು.

ಸಹಸ್ರಾರು ಜನರು ನಾಗರ ಪೂಜೆ ಸಲ್ಲಿಸಿ ಭಕ್ತಿ-ಭಾವ ಮೆರೆದರು. ಹುತ್ತಗಳಿಗೆ ಹಾಲೆರೆದು, ಬೆಳ್ಳಿ ನಾಗರ ಮೂರ್ತಿ ಅರ್ಪಿಸಿ ಹರಕೆ ತೀರಿಸಿದರು.

ಷಷ್ಠಿಯ ದಿನವಾದ ಶನಿವಾರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯ ನಡೆದವು. ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಸುಬ್ರಹ್ಮಣ್ಯೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಕರೊನಾ ಹಾಗೂ ದೇವಾಲಯದ ಜೀರ್ಣೋದ್ಧಾರ ಕಾರ್ಯದಿಂದ ಕಳೆದ 3 ವರ್ಷಗಳಿಂದ ಸಿದ್ದಲಿಂಗಪುರದ ಷಷ್ಠಿ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಷಷ್ಠಿ ಜಾತ್ರೆ ನಡೆದಿರಲಿಲ್ಲ. ಭಕ್ತರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಲು ಹಾಗೂ ದರ್ಶನ ಪಡೆಯಲು ಅವಕಾಶ ಸಹ ನೀಡಿರಲಿಲ್ಲ.

ಹೀಗಾಗಿ, ಈ ಬಾರಿ ಅದ್ದೂರಿ ಷಷ್ಠಿ ಜಾತ್ರೆ ನಡೆಯಿತು. ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಭಕ್ತರು ಬೆಳಗ್ಗೆಯಿಂದಲೇ ದೇವಾಲಯದ ಮುಂದೆ ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಕುಕ್ಕೆ ಸುಬ್ರಹ್ಮಣ್ಯ ಹೊರತುಪಡಿಸಿದರೆ ಮೈಸೂರು ಭಾಗದ ಸಿದ್ದಲಿಂಗಪುರದ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ನಡೆಯುವ ಷಷ್ಠಿ ಜಾತ್ರೆ ಈ ಭಾಗದಲ್ಲಿ ಹೆಸರುವಾಸಿಯಾಗಿದೆ. ಸಿದ್ದಲಿಂಗಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಷಷ್ಠಿ ಜಾತ್ರೆ ನಡೆಯಿತು.

ಯಾವ ಪೂಜೆಗಳು?

ಅರ್ಚಕ ಎಂ.ವಿ.ಸುಬ್ರಹ್ಮಣ್ಯ ನೇತೃತ್ವದಲ್ಲಿ ದೇವರ ಮೂರ್ತಿಗೆ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಪುರುಷ ಸೂಕ್ತ, ಶ್ರೀಸೂಕ್ತ, ಸಹಸ್ರನಾಮಾರ್ಚನೆ, ಅಷ್ಟಾವಧಾನ ಸೇವೆಯನ್ನು ಅರ್ಪಿಸಲಾಯಿತು. ನಂತರ 6 ಅಡಿ ಎತ್ತರದ ಬೆಳ್ಳಿಯ ನಾಗಾಭರಣ ತೊಡಿಸಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಬಳಿಕ ಬೆಳಗ್ಗೆ 3ರಿಂದ ರಾತ್ರಿ 10ರ ವರೆಗೆ ಭಕ್ತರಿಗೆ ಸ್ವಾಮಿ ದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಡಲಾಯಿತು. ಬಳಿಕ ದೇವಾಲಯ ಬಂದ್ ಮಾಡಿ, ನಾಗಾಭರಣ ತೆಗೆದು ಅರಮನೆಗೆ ಸುರಕ್ಷಿತವಾಗಿ ಕೊಂಡೊಯ್ಯಲಾಯಿತು.

ದೇವಾಲಯಲ್ಲಿ ಎಂದಿನಂತೆ ಧರ್ಮದರ್ಶನ ಹಾಗೂ ಟಿಕೆಟ್ ಪಡೆದು ವಿಶೇಷ ದರ್ಶನ ಪಡೆಯಲೆಂದು ಎರಡು ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಧರ್ಮ ದರ್ಶನಕ್ಕೆ ಒಂದು ಸಾಲು ಮತ್ತು 30 ರೂ. ಟಿಕೆಟ್ ಪಡೆದ ಭಕ್ತರಿಗೆ ವಿಶೇಷ ದರ್ಶನಕ್ಕೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು.

ನೂಕುನುಗ್ಗಲು ಉಂಟಾಗದಂತೆ ಕಟ್ಟೆಚ್ಚರ ವಹಿಸಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಕಂದಾಯ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಹುತ್ತಕ್ಕೆ ಹಾಲೆರೆದ ಭಕ್ತರು:

ಸರದಿ ಸಾಲಿನಲ್ಲಿ ದೇವಾಲಯಕ್ಕೆ ಪ್ರವೇಶಿಸಲು ಆಗದೇ ಇದ್ದವರು ದೇವಾಲಯದ ಪಕ್ಕದ ಖಾಲಿ ನಿವೇಶನದಲ್ಲಿದ್ದ ಹುತ್ತ, ನಾಗನಹಳ್ಳಿ ರಸ್ತೆ, ಮೇಳಾಪುರದ ರಸ್ತೆಯಲ್ಲಿರುವ ಹುತ್ತಗಳಿಗೆ ಅರಿಶಿಣ, ಕುಂಕುಮ, ಬೆಣ್ಣೆ, ಹಾಲೆರೆದು ಪೂಜೆ ಮಾಡಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net