

ಮೈಸೂರು: ಮೈಸೂರು ಭಾಗದಲ್ಲಿ ಹೆಸರುವಾಸಿಯಾಗಿರುವ ಸಿದ್ದಲಿಂಗಪುರದ ಷಷ್ಠಿ ಜಾತ್ರಾ ಮಹೋತ್ಸವ ಈ ಸಲ ನಡೆಯಲಿಲ್ಲ. ಆದರೆ ಗ್ರಾಮದ ಷಷ್ಠಿ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಪೂಜಾ ಕಾರ್ಯಕ್ರಮ ಮಂಗಳವಾರ ನೆರವೇರಿತು.
ಬೆಂಗಳೂರು-ಮೈಸೂರು ಮುಖ್ಯ ರಸ್ತೆಯಲ್ಲಿರುವ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಾತ್ರೆ ರದ್ದು ಮಾಡಿ, ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಇದು ಭಕ್ತರಲ್ಲಿ ನಿರಾಶೆ ಮೂಡಿಸಿತು. ಆದರೆ ದೇವಾಲಯದಲ್ಲಿ ಸಂಪ್ರದಾಯದಂತೆ ಪೂಜೆ ಜರುಗಿತು.
ದೇವಾಲಯದ ಗರ್ಭಗುಡಿಯ ಹಿಂಭಾಗದಲ್ಲಿರುವ ಪ್ರಾಂಗಣದಲ್ಲಿ ಷಷ್ಠಿ ಪೂಜೆ ಜರುಗಿತು. ಗರ್ಭಗುಡಿಯಲ್ಲಿರುವ ಮೂಲ ಹುತ್ತಕ್ಕೆ ಜೀರ್ಣೋದ್ಧಾರ ಕಾಮಗಾರಿಯಿಂದಾಗಿ ಹಾನಿಯಾಗದಂತೆ ಕಟ್ಟೆಚ್ಚರ ವಹಿಸಿ ಕಬ್ಬಿಣದ ಬಾಕ್ಸ್‌ನ ಸುತ್ತ ಜೋಡಿಸಲಾಗಿದೆ. ಪೂಜಾ ಕೈಂಕರ್ಯಕ್ಕಾಗಿ ಗರ್ಭಗುಡಿಯ ಹಿಂಭಾಗದ ಪ್ರಾಂಗಣದಲ್ಲಿ ವಿಗ್ರಹವನ್ನಿಟ್ಟು ಅಲಂಕಾರ ಮಾಡಲಾಯಿತು.
ಅರ್ಚಕ ಎಂ.ವಿ. ಸುಬ್ರಹ್ಮಣ್ಯ ನೇತೃತ್ವದಲ್ಲಿ ಬೆಳಗ್ಗೆ 5ರಿಂದಲೇ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಜರುಗಿದವು. ನಂತರ ಅಲಂಕಾರ ಮಾಡಿ ಸ್ಕಂಧ ಷಷ್ಠಿ ಪೂಜಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ನಿರ್ಬಂಧ ನಡುವೆಯೂ ಬಂದ ಭಕ್ತರು:
ಈ ಜಾತ್ರೆ ಹಳೇ ಮೈಸೂರು ಭಾಗದಲ್ಲಿ ಹೆಸರುವಾಸಿಯಾಗಿದೆ. ಕುಕ್ಕೆಸುಬ್ರಹ್ಮಣ್ಯಗೆ ಹೋಗಲು ಸಾಧ್ಯವಾಗದೇ ಇದ್ದವರು ಇಲ್ಲಿಗೆ ಬಂದು ಪೂಜೆ ಸಲ್ಲಿಸುವ ವಾಡಿಕೆ ಇದೆ. ಅದರಲ್ಲೂ ಸುಬ್ರಹ್ಮಣ್ಯೇಶ್ವರನ ಜನ್ಮ ದಿನದಂದು ಆಚರಿಸುವ ಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಮಾತ್ರವಲ್ಲದೆ, ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ. ಆದರೆ, ಈ ಸಲ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದಲೂ ದೇವಾಲಯಕ್ಕೆ ಆಗಮಿಸಲು ಸಾಧ್ಯವಾಗದೆ ಇದ್ದ ಭಕ್ತರು, ಜಾತ್ರೆ ವೇಳೆ ದೇವರ ದರ್ಶನ ಪಡೆಯಲು ಉತ್ಸುಕರಾಗಿ ವಿವಿಧೆಡೆಯಿಂದ ಆಗಮಿಸಿದ್ದರು.
4 ದಿನದ ಹಿಂದೆಯೇ ತಾಲೂಕು ಆಡಳಿತ ಆದೇಶ ಹೊರಡಿಸಿ, ಜಾತ್ರೆಗೆ ನಿರ್ಬಂಧ ಹೇರಿರುವ ಬಗ್ಗೆ ಸ್ಪಷ್ಟಪಡಿಸಿತ್ತು. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಿದ್ದಲಿಂಗಪುರದ ದೇವಾಲಯಕ್ಕೆ ಆಗಮಿಸಿದ್ದರು. ಯಾರಿಗೂ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ದೇವಾಲಯದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಹುತ್ತಕ್ಕೆ ಭಕ್ತರು ಹಾಲೆರೆದರು:
ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ದೇವಾಲಯದ ಸಮೀಪ ಇದ್ದ ಹುತ್ತಕ್ಕೆ ಭಕ್ತರು ಹಾಲೆರೆದು ಪೂಜಿಸಿದರು. ದೇವಾಲಯದಿಂದ 150 ಮೀಟರ್ ಅಂತರದಲ್ಲಿದ್ದ ಖಾಲಿ ಜಾಗದಲ್ಲಿ 3-4 ಹುತ್ತಗಳಿದ್ದು, ಅವುಗಳಿಗೆ ಭಕ್ತರು ಅರಿಶಿಣ, ಕುಂಕುಮ ಹಚ್ಚಿ, ಹಾಲು-ತುಪ್ಪ ಎರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಹುತ್ತವಿದ್ದ ಸ್ಥಳಕ್ಕೆ ಹೋಗುವ ಹಾದಿಯಲ್ಲಿ ವಿವಿಧ ಆಟಿಕೆ, ತಿಂಡಿ-ತಿನಿಸು, ಕಬ್ಬಿನ ಜಲ್ಲೆ, ಆಲೆಮನೆ ಬೆಲ್ಲ, ಅಲಂಕಾರಿಕ ವಸ್ತು, ಹಾಲು, ಚಿನ್ನ-ಬೆಳ್ಳಿ ನಾಗರ, ಉಡುಪು, ಚಪ್ಪಲಿ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟಗಾರರು ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದರು.
ಬೆಳ್ಳಿ ನಾಗಾಭರಣ ಅಲಂಕಾರ ಇಲ್ಲ:
ಈ ದೇವಾಲಯದಲ್ಲಿ ಷಷ್ಠಿಯ ದಿನ ಮೈಸೂರು ಅರಮನೆಯಿಂದ ಪ್ರತಿವರ್ಷ ಬೆಳ್ಳಿಯ ನಾಗಾಭರಣ ತಂದು ಗರ್ಭಗುಡಿಯಲ್ಲಿರುವ ಮೂಲ ವಿಗ್ರಹಕ್ಕೆ ಧರಿಸಿ ಅಲಂಕಾರ ಮಾಡಲಾಗುತ್ತಿತ್ತು. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನನದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬೆಳ್ಳಿ ನಾಗಾಭರಣ ನೀಡಲಾಗಿದ್ದು, ವರ್ಷಕ್ಕೆ ಒಂದೇ ದಿನ ಈ ದೇವಾಲಯಕ್ಕೆ ತಂದು ಅಲಂಕಾರ ಮಾಡಿ ಪೂಜಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ನಾಗಾಭರಣ ಧರಿಸದೆ ಪೂಜಾ ಮಹೋತ್ಸವ ಜರುಗಿತು.
ನಾಳೆಯಿಂದ ದರ್ಶನ
ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಬಹುತೇಕ ಜನರು ಸೋಮವಾರವೇ ದರ್ಶನ ಪಡೆದಿದ್ದಾರೆ. ಇಂದು ಮಾಡಿರುವ ಅಲಂಕಾರ ಇನ್ನೂ ಎರಡು ದಿನ ಇರಲಿದೆ. ಭಕ್ತರು ಬುಧವಾರದಿಂದ ದೇವಾಲಯಕ್ಕೆ ಬಂದು ದರ್ಶನ ಪಡೆದುಕೊಳ್ಳಬಹುದು. ಇಂದು ಸಂಪ್ರದಾಯ ಹಾಗೂ ಧಾರ್ಮಿಕ ಭಾವನೆಗೆ ಅಡಚಣೆಯಾಗದಂತೆ ಪೂಜೆ ಸಲ್ಲಿಸಲಾಗಿದೆ ಎಂದು ದೇವಾಲಯದ ಅರ್ಚಕ ಎಂ.ವಿ. ಸುಬ್ರಹ್ಮಣ್ಯ ತಿಳಿಸಿದರು.
ನಗರದ ವಿವಿಧೆಡೆಯೂ ಆಚರಣೆ:
ನಗರದ ವಿವಿಧೆಡೆ ಮಂಗಳವಾರ ಷಷ್ಠಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧೆಡೆ ಇರುವ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು.
ಬನ್ನಿಮಂಟಪದ ಸುಬ್ರಹ್ಮಣ್ಯೇಶ್ವರ ದೇವಾಲಯ, ಹೆಬ್ಬಾಳು ಬಡಾವಣೆ ಸುಬ್ರಹ್ಮಣ್ಯೇಶ್ವರ, ವಿದ್ಯಾರಣ್ಯಪುರಂ, ಒಂಟಿಕೊಪ್ಪಲಿನ ದೇವಾಲಯದ, ದಿವಾನ್ಸ್ ರಸ್ತೆ ಅಮೃತೇಶ್ವರ ದೇವಾಲಯ ಸೇರಿದಂತೆ ವಿವಿಧೆಡೆ ವಿಶೇಷ ಪೂಜಾ ಕಾರ್ಯ ನಡೆದವು. ಹುತ್ತ ಹಾಗೂ ನಾಗರಕಲ್ಲಿಗೆ ಹಾಲೆರೆದು ಭಕ್ತಿ-ಭಾವದಿಂದ ಸ್ಕಂಧ ಷಷ್ಠಿಯನ್ನು ಆಚರಿಸಲಾಯಿತು.