ಸಿದ್ದರಾಮೋತ್ಸವ ನಡೆಸುವ ಅಗತ್ಯವಿಲ್ಲ: ಎಚ್.ವಿಶ್ವನಾಥ್

2
ಎಂಎಲ್‌ಸಿ ವಿಶ್ವನಾಥ್ ಅವರಿಗೆ ಅವರ ಸ್ನೇಹಿತರು ಕೊಟ್ಟಿದ್ದ ಅಂಬುಲೆನ್ಸ್ ಅನ್ನು ಕೆ.ಆರ್.ಆಸ್ಪತ್ರೆಯ ನೆಪ್ರೊ ಯುರಾಲಜಿ ಸಂಸ್ಥೆಗೆ ಹಸ್ತಾಂತರಿಸಿದರು. ನೆಪ್ರೊ ಯುರಾಲಜಿ ಸಂಸ್ಥೆಯ ನಿರ್ದೇಶಕ ಡಾ.ಆರ್. ಕೇಶವಮೂರ್ತಿ, ಯುರಾಲಜಿ ವಿಭಾಗದ ಮುಖ್ಯಸ್ಥ ಡಾ.ನರೇಂದ್ರ, ಡಾ.ಮಂಜುನಾಥ್, ಡಾ.ದಿನೇಶ್ ಇನ್ನಿತರರಿದ್ದರು
Published on

ಮೈಸೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 75ನೇ ಜನ್ಮದಿನ ಅಂಗವಾಗಿ ನಡೆಸಲು ಉದ್ದೇಶಿಸಿರುವ ‘ಸಿದ್ದರಾಮೋತ್ಸವ’ದ ಅಗತ್ಯ ಇರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವದ ಬದಲು ಕಾಂಗ್ರೆಸ್ಸಿನ ಉತ್ಸವ ಆಗಬೇಕು. ಇಂದಿರಾಗಾಂಧಿ, ಡಿ.ದೇವರಾಜ ಅರಸು ಸ್ಮರಣೆ ಮಾಡಬೇಕು. ಕಾಂಗ್ರೆಸ್‌ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇರಬಾರದು ಎಂದರು.

ಇತ್ತೀಚಿಗೆ ನಗರದಲ್ಲಿ ನಡೆದ ಸಿದ್ದರಾಮಯ್ಯ ಕುರಿತಾದ ಕಾರ್ಯಕ್ರಮದಲ್ಲಿ ಯಾರೊಬ್ಬರೂ ಕಾಂಗ್ರೆಸ್ ಬಗ್ಗೆ ಮಾತನಾಡಲಿಲ್ಲ. ಸ್ವತಃ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಹೆಸರು ಹೇಳಲಿಲ್ಲ. ಬರೀ ಸಿದ್ದರಾಮಯ್ಯ ಪುಂಗಿ ಊದಿದರೇ ಹೊರತು, ಕಾಂಗ್ರೆಸ್ ಪುಂಗಿ ಊದುವವರು ಯಾರು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮಾತೆತ್ತಿದರೆ, ಅನ್ನಭಾಗ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ನಾನು ಶಿಕ್ಷಣ ಸಚಿವನಾಗಿದ್ದೆ. ಆಗಲೇ ಬಿಸಿಯೂಟ ಯೋಜನೆ ಜಾರಿಗೊಳಿಸಿದ್ದವು. 85 ಲಕ್ಷ ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದರು. ನಾವು ಯಶಸ್ವಿನಿ ಆರೋಗ್ಯ ಯೋಜನೆ ಜಾರಿಗೆ ತಂದಿದ್ದವು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದನಂತರ ಅದಕ್ಕೂ ಬಾಗಿಲು ಹಾಕಿದ್ದರು ಎಂದು ವಾಗ್ದಾಳಿ ನಡೆಸಿದರು.

ಜಾತಿ ರಾಜಕಾರಣ ಸಲ್ಲ: ಕಾಂಗ್ರೆಸ್‌ನಲ್ಲಿ ಒಕ್ಕಲಿಗ ವರ್ಸಸ್ ಅಲ್ಪಸಂಖ್ಯಾತ ರಾಜಕಾರಣ ಮುನ್ನೆಲೆಗೆ ಬಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಪ್ರತಿಯೊಬ್ಬರೂ ತಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಜಾತಿ ರಾಜಕಾರಣ ಮಾಡುವ ಅವಶ್ಯವಿದೆ. ಆದರೆ, ಅತಿಯಾಗಬಾರದು. ಎಲ್ಲ ಜಾತಿಗಳು, ಧರ್ಮೀಯರು ಬೆಂಬಲಿಸಿದರೆ ಮಾತ್ರ ರಾಜಕಾರಣ ಮಾಡಲು, ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಕರ್ನಾಟಕದಲ್ಲಿ ಹಲವು ನಾಯಕರು ಆಡಳಿತ ನಡೆಸಿದ್ದಾರೆ. ಆದರೀಗ ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ಕೇಳಿರುವುದನ್ನು ಸಮರ್ಥಿಸಿಕೊಂಡ ವಿಶ್ವನಾಥ್, ಎಚ್.ಡಿ.ದೇವೇಗೌಡರ ಮನೆಯ ಜನರೆಲ್ಲಾ ರಾಜಕಾರಣದಲ್ಲಿದ್ದಾರೆ. ಅದನ್ನೇಕೆ ಯಾರೂ ಪ್ರಶ್ನಿಸುವುದಿಲ್ಲ? ಸತತ ಎಂಟು ಬಾರಿ ಪ್ರತಿನಿಧಿಸಿರುವ ಶಿಕಾರಿಪುರ ಕ್ಷೇತ್ರದಲ್ಲಿ ಪುತ್ರ ವಿಜಯೇಂದ್ರಗೆ ಯಡಿಯೂರಪ್ಪ ಟಿಕೆಟ್ ಕೇಳಿರುವುದರಲ್ಲಿ ತಪ್ಪೇನಿಲ್ಲ ಎಂದರು.

ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ಅವರ ಕೊಡುಗೆ ಅಪಾರವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಪಕ್ಷಕ್ಕೆ ಅವರ ಮಾರ್ಗದರ್ಶನ ಅಗತ್ಯವಿದೆ. ಹೀಗಾಗಿ ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು ಎಂದರು.
ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಪರಸ್ಪರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್‌ನಲ್ಲಿ ಪುತ್ರೋತ್ಸವಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಇದರಲ್ಲಿ ಹೊಸತೇನಿಲ್ಲ ಎಂದು ಹೇಳಿದರು.

ವೈಯಕ್ತಿಕ ನಿರ್ಧಾರ: ಪುತ್ರ ಅಮಿತ್ ದೇವರಹಟ್ಟಿ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆತ ನನ್ನ ಮಗನೇ ಇರಬಹುದು. ಸಭೆಯಲ್ಲಿ ಭಾಗವಹಿಸುವುದು ಆತನ ವೈಯಕ್ತಿಕ ನಿರ್ಧಾರ. ಅವನಿಗೂ ಸ್ವಂತ ನಿರ್ಧಾರ ಕೈಗೊಳ್ಳುವ ಶಕ್ತಿಯಿದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಯ ಅಗತ್ಯ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕ್ರೆಡಿಟ್ ವಾರ್ ಏತಕ್ಕೆ?: ಮೈಸೂರು ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಎಲ್ಲರೂ ನನ್ನದು, ನನ್ನದು ಎನ್ನುತ್ತಿದ್ದಾರೆ. ಪ್ರತಾಪ್ ಸಿಂಹ ಮಾತ್ರವಲ್ಲದೇ ಪ್ರತಿಯೊಬ್ಬರೂ ಕ್ರೆಡಿಟ್ ವಾರ್‌ನಲ್ಲಿ ತೊಡಗಿದ್ದಾರೆ. ಸರ್ಕಾರಕ್ಕೆ ಜನರು ನೀಡುವ ತೆರಿಗೆಯಿಂದ ಖಜಾನೆಗೆ ಹಣ ಬರುತ್ತದೆ. ನಾವು ಟ್ರಸ್ಟಿಗಳಾಗಿ ಕೆಲಸ ಮಾಡುತ್ತೇವಷ್ಟೆ ಎಂದು ಸ್ವಪಕ್ಷೀಯರ ವಿರುದ್ಧ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net