

ಚಿತ್ರದುರ್ಗ: ರಾಜ್ಯದಲ್ಲಿ ಈ ಹಿಂದೆ 5 ವರ್ಷ ಮುಖ್ಯಮಂತ್ರಿಯಾಗಿದ್ದ ವೇಳೆ ಹಲವು ಭಾಗ್ಯಗಳನ್ನು ನೀಡಿದ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಎಐಸಿಸಿಗೆ ಆಗ್ರಹಿಸಿ ಶೋಷಿತ ಸಮುದಾಯದ ಮುಖಂಡರು, ಕಾರ್ಯಕರ್ತರು ಬುಧವಾರ ಮೆರವಣಿಗೆ ನಡೆಸಿದರು.
ಹೊಳಲ್ಕೆರೆ ರಸ್ತೆಯ ಸಂಗೊಳ್ಳಿರಾಯಣ್ಣ ವೃತ್ತದ ಬಳಿ ಜಮಾಯಿಸಿದ ಶೋಷಿತ ಸಮುದಾಯದವರು ಸಿದ್ದರಾಮಯ್ಯ ಅವರ ಭಾವಚಿತ್ರ, ಕಾಂಗ್ರೆಸ್ ಬಾವುಟ ಹಿಡಿದು ಅಲ್ಲಿಂದ ಮೆರವಣಿಗೆ ಆರಂಭಿಸಿದರು. ಮಹಾತ್ಮಗಾಂಧಿ, ಎಸ್‌ಬಿಐ ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಸಂಚರಿಸಿ ಕಾಂಗ್ರೆಸ್ ಕಚೇರಿ ಮುಂಭಾಗ ಅಂತ್ಯಗೊಳಿಸಿದರು.
ಮುಖಂಡ ಬಿ.ಟಿ.ಜಗದೀಶ್ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಬೇಕು. ಏಕೆಂದರೆ ಮುಂಬರುವ ತಾಪಂ, ಜಿಪಂ ಹಾಗೂ ಲೋಕಸಭಾ ಚುನಾವಣೆಗಳಲ್ಲೂ ಅತಿ ಹೆಚ್ಚು ಸ್ಥಾನ ಗಳಿಸಲು ಅಹಿಂದ ನಾಯಕರಾದ ಇವರಿಂದ ಸಾಧ್ಯವಿದೆ. ಆದ್ದರಿಂದ ಎಐಸಿಸಿ ನಾಯಕರು ಈ ಕುರಿತು ಉತ್ತಮ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಎಚ್.ಮಂಜಪ್ಪ, ಅಶೋಕ್ ನಾಯ್ಡು, ಎಸ್.ಬಿ.ಎಲ್.ಮಲ್ಲಿಕಾರ್ಜುನ್, ಮುದಸಿರ್ ನವಾಜ್, ಪ್ರಶಾಂತ್ ಯಾದವ್, ಪರಶುರಾಮ್, ಯೋಗೇಶ್, ಗಂಗಾಧರ್, ಷಣ್ಮುಖ ಇತರರಿದ್ದರು.