

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ನಾನು ಕ್ಷೇತ್ರ ಬಿಟ್ಟು ಕೊಡಲು ಸಿದ್ಧ ಎಂದು ಮಾಜಿ ಶಾಸಕ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಕರ್ನಾಟಕದ ಎಲ್ಲ ಕ್ಷೇತ್ರಗಳಿಂದಲೂ ಕರೆಯುತ್ತಿದ್ದಾರೆ. ಎಲ್ಲಿ ನಿಲ್ತಾರೋ ಎಂದು ಅವರನ್ನು ಕೇಳಬೇಕು. ಕಲಘಟಗಿ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಸ್ವಾಗತ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ ಎಂದು ಹೇಳಿದ್ದು ಯಾರು? ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದೆಂದು ಹೇಳಿದ್ದು ನನ್ನ ವೈಯಕ್ತಿಕ ಅಭಿಪ್ತಾಯ. ಅದು ಅವರ ವಿವೇಚನೆಗೆ ಬಿಟ್ಟಿದ್ದು ಎಂದರು.
ಕಲಘಟಗಿಯಲ್ಲಿ ರಾಜಕೀಯ ಉದ್ದೇಶಕ್ಕಾಗಿ ಅಥವಾ ವಿಶ್ವದಾಖಲೆಗಾಗಿ ಸಾಮೂಹಿಕ ವಿವಾಹ ಆಯೋಜನೆ ಮಾಡಿಲ್ಲ. ಈ ಹಿಂದೆ ನಾವು ಏಕಕಾಲಕ್ಕೆ 1200 ಜೋಡಿ ಸಾಮೂಹಿಕ ವಿವಾಹ ಮಾಡಿಸಿದ್ದೇವೆ. 3700 ಜೋಡಿ ಸಾಮೂಹಿಕ ವಿವಾಹ ವಿಶ್ವದಾಖಲೆಯಾಗಿದೆ. ನಾವು 4 ಸಾವಿರ ಗುರಿ ಇಟ್ಟುಕೊಂಡಿದ್ದೇವೆ. ಕೋವಿಡ್ ಕಾರಣಕ್ಕೆ ಕಳೆದ 2 ವರ್ಷ ಸಾಮೂಹಿಕ ವಿವಾಹ ಆಯೋಜನೆ ಮಾಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.