

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಮಾಡಿದವರು ಸನಾತನ ಧರ್ಮದವರೆಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾವು ಮತ್ತು ಕಾಂಗ್ರೆಸ್ನವರು ಹಿಂದು ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮವೆಂದರೆ ಹಿಂದು ಧರ್ಮ. ವಿಶ್ವದ ವಿವಿಧೆಡೆಯಿಂದ ಲಕ್ಷಾಂತರ ಜನರು ಸನಾತನ ಧರ್ಮದ ಅಧ್ಯಯನಕ್ಕಾಗಿ ಭಾರತಕ್ಕೆ ಬರುತ್ತಾರೆ. ಅಂತಹದರಲ್ಲಿ ಸಿದ್ದರಾಮಯ್ಯ ಅವರು ಈ ಧರ್ಮದ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ತಮ್ಮೊಂದಿಗೆ ಕಾಂಗ್ರೆಸ್ನವರು ಸಹ ಹಿಂದು ದ್ವೇಷಿ ಎಂಬುದನ್ನು ತೋರಿಸಿದ್ದಾರೆ ಎಂದರು.
ಬಾಟ್ಲಾ ಹೌಸ್ ಪ್ರಕರಣದಲ್ಲಿ ಇನಸ್ಪೆಕ್ಟರ್ ಮೋಹನಚಂದ್ರ ಶರ್ಮಾ ಸಾವಿಗೀಡಾಗಿದ್ದಕ್ಕೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡರಿಗೆ ದುಃಖವಾಗಲಿಲ್ಲ. ಬದಲಾಗಿ ಅಲ್ಲಿದ್ದ ಭಯೋತ್ಪಾದಕ ಸತ್ತಾಗ ಅವರು ದುಃಖ ವ್ಯಕ್ತಪಡಿಸಿದರು. ಕಾಂಗ್ರೆಸ್ನವರು ಭಯೋತ್ಪಾದಕ ಕಸಬ್ಗೆ ಬಿರ್ಯಾನಿ ತಿನ್ನಿಸಿದ್ದರು. ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪಾಕಿಸ್ತಾನದ ಸಹಕಾರ ಕೋರಿದ್ದ ಕಾಂಗ್ರೆಸ್ನವರು, ಇಂದು ಹಿಂದು ಮತ್ತು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಮಾಡುತ್ತ, ಕುಂಕುಮ ಹಚ್ಚಿಕೊಂಡು ನಾಟಕವಾಡುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಹಿಂದುಗಳ ಬಗ್ಗೆ ಕೀಳಾಗಿ ಮಾತನಾಡುವ ಸಿದ್ದರಾಮಯ್ಯ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು.
ಹಿಂದು ಮತ್ತು ಹಿಂದುತ್ವದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಹಿಂದು ಜಾತಿ ಆಧಾರಿತ ಅಲ್ಲ, ಬದಲಾಗಿ ಅದೊಂದು ಜೀವನ ಪದ್ಧತಿ. ಹಿಂದುಗಳ ಮತಗಳಿಗಾಗಿ ತಾನು ಒಬ್ಬ ಹಿಂದುವೆಂದು ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಸ್ಲಿಂರ ತುಷ್ಟಿಕರಣಕ್ಕಾಗಿ ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಹಿಂದುತ್ವವನ್ನು ವಿರೋಧಿಸುತ್ತಿದ್ದಾರೆ. ರಾಮ ಮಂದಿರವನ್ನು ರಾಜಕೀಯಗೊಳಿಸಿದ್ದು ಕಾಂಗ್ರೆಸ್ನವರು. ರಾಮ ಮಂದಿರಕ್ಕೆ ಬೀಗ ಹಾಕಿದ್ದ ಕಾಂಗ್ರೆಸ್ನವರು, ಕರಸೇವಕರ ಮೇಲೆ ಗೋಲಿಬಾರ್ ಸಹ ನಡೆಸಿದರು. ಜನರು ಆ ಪಕ್ಷದವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.