

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೋತು ಮನೆಗೆ ಹೋಗುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು.
‘ವಿಧಾನಸಭಾ ಚುನಾವಣೆಯಲ್ಲಿ ನಾವು ಸುಮ್ಮನೇ ಕುಳಿತರೂ ಗೆಲ್ಲುತ್ತೇವೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಶನಿವಾರ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಸಲ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರು ಮನೆಗೆ ಹೋಗುವ ಕಾರ್ಯಕ್ರಮ ಇದೆ. ಅದಕ್ಕಾಗಿ ಅವರು ಆ ರೀತಿ ಹೇಳುತ್ತಿದ್ದಾರೆ ಎಂದು ಜರಿದರು.
ಗುಜರಾತ್ ಚುನಾವಣೆ ನಂತರ ಸಹಜವಾಗಿಯೇ ಕರ್ನಾಟಕದ ಚುನಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಪಕ್ಷದಿಂದ ಈಗಾಗಲೇ ಜನಸಂಪರ್ಕ ಮತ್ತು ಸಂಘಟನೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಚುನಾವಣೆ ಸಮೀಪವಾಗುತ್ತಿರುವುದರಿಂದ ಈ ಚಟುವಟಿಕೆಯನ್ನು ಇನ್ನಷ್ಟು ಹೆಚ್ಚು ಮಾಡಬೇಕು. ಜತೆಗೆ, ಪರಿಣಾಮಕಾರಿ ಆಗಿ ಮಾಡಬೇಕಿದೆ. ಸಂಘಟನೆ ದೃಷ್ಟಿಯಿಂದ ಎಲ್ಲ ತಯಾರಿ ನಡೆಸುತ್ತಿದ್ದೇವೆ ಎಂದರು.
ಈ ಸಲ ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಭಾಗದಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಅದಕ್ಕಾಗಿ ಎಲ್ಲ ತಯಾರಿ ಸಹ ಮಾಡಲಾಗುತ್ತಿದೆ ಎಂದರು.
‘ಅವಧಿಗೆ ಮುನ್ನವೇ ವಿಧಾನಸಭಾ ಚುನಾವಣೆ ನಡೆಯಲಿದೆಯೇ?’ ಪ್ರಶ್ನೆಗೆ ಸಿಡಿಮಿಡಿಗೊಂಡ ಸಿಎಂ, ‘ಇಂತಹವೆಲ್ಲ ನಿಮಗೆ ಯಾರು ಹೇಳುತ್ತಾರೆ’ ಎಂದು ಚುಟುಕಾಗಿ ಉತ್ತರಿಸಿ ನಿರ್ಗಮಿಸಿದರು.