

ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸ್ಯಾಂಟ್ರೋ ರವಿ ಮನೆ ಮೇಲೆ ನಡೆದ ದಾಳಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೆನಪಿಸುವ ಕಾರ್ಯ ಮಾಡಿದರು.
ಬಿಜೆಪಿ ಎಸ್‌ಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದರು. ಈ ಸಂದರ್ಭ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸ್ಯಾಂಟ್ರೋ ರವಿ ಪ್ರಕರಣದ ಕುರಿತು ಜಿ.ಟಿ. ದೇವೇಗೌಡ ಸಿಎಂ ಗಮನ ಸೆಳೆಯುವ ಪ್ರಯತ್ನ ಮಾಡಿದರು.
‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸ್ಯಾಂಟ್ರೋ ರವಿ ಮನೆ ಮೇಲೆ ದಾಳಿ ನಡೆದಿತ್ತು. ದಾಳಿ ನಡೆಸಿದ ಇನ್ಸ್‌ಪೆಕ್ಟರ್ ಯಶವಂತ್ ಅವರನ್ನು ಅಮಾನತು ಮಾಡಲಾಯಿತು’ ಎಂದು ಜಿ.ಟಿ. ದೇವೇಗೌಡ ಹೇಳಿದರು. ಜಿ.ಟಿ. ದೇವೇಗೌಡರ ಮಾತನ್ನು ಕೇಳಿಸಿಕೊಂಡು ಮುಖ್ಯಮಂತ್ರಿ ಸ್ಥಳದಿಂದ ನಿರ್ಗಮಿಸಿದರು.
ಸ್ಯಾಂಟ್ರೋ ರವಿ ಕುರಿತು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳು ಜಿ.ಟಿ. ದೇವೇಗೌಡರನ್ನು ಪ್ರಶ್ನಿಸಿದ ಸಂದರ್ಭ ‘ಸ್ಯಾಂಟ್ರೋ ರವಿ ಯಾರು ಎಂಬುದು ನನಗೆ ಗೊತ್ತಿಲ್ಲ, ನಾನು ಆ ಲೈನ್‌ನಲ್ಲಿ ಇಲ್ಲ’ ಎಂದು ಹೇಳಿಕೆ ನೀಡಿದ್ದರು.