

ಹಾಸನ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ರಾಜೀನಾಮೆ ನೀಡುವವರೆಗೂ ಬಿಜೆಪಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬ ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಪಾರ್ಕಿನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನಾಲ್ಕು ದಶಕಗಳಿಂದ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೆ ರಾಜಕಾರಣ ಮಾಡಿದ್ದೇನೆ ಎಂದು ಮೊನ್ನೆ ಮೊನ್ನೆವರೆಗೂ ಜಂಬ ಕೊಚ್ಚಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಲಜ್ಜೆಗೆಟ್ಟ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಇದನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿಯೂ, ಕೂಡ ಅವರಿಗೆ ಅವರಿಗೆ ಹಿನ್ನಡೆಯಾಗಿದೆ. ನ್ಯಾಯಾಲಯ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.
ಪ್ರಾಸಿಟ್ಯೂಷನ್‌ಗೆ ಅನುಮತಿ ನೀಡಿದ ನಂತರ ರಾಜ್ಯಪಾಲರನ್ನು ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಮುಖಂಡರು ಕೀಳು ಮಟ್ಟದಲ್ಲಿ ಹಿಯಾಳಿಸಿದರು. ನಿಜವಾಗಿಯೂ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು. ನಂತರ ಕಾನೂನು ಹೋರಾಟವನ್ನು ಮುಂದುವರಿಸಲಿ ಎಂದು ಹೇಳಿದರು.
ನ್ಯಾಯಾಲಯ ಮುಖ್ಯಮಂತ್ರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಮೈಸೂರು ಲೋಕಾಯುಕ್ತ ಎಸ್ಪಿ ಅವರಿಗೆ ಆದೇಶ ನೀಡಿದ್ದು, ಆದರೆ ಎಫ್‌ಐಆರ್ ದಾಖಲು ಮಾಡದಂತೆ ಎಸ್‌ಪಿ ಅವರನ್ನು ಎರಡು ಮೂರು ದಿನ ಹೊರಗೆ ಇಟ್ಟಿದ್ದರು. ಆದರೂ ಈಗ ಅವರ ಮೇಲೆ ಪ್ರಕರಣ ದಾಖಲಾಗಿದ್ದು, ಸಿಎಂ ಅವರು ಎ1 ಆರೋಪಿಯಾಗಿದ್ದಾರೆ ಎಂದರು.
ಕರ್ನಾಟಕ ಪ್ರಭುದ್ಧತೆಯ ನಾಡು, ಈ ನಾಡಿನಲ್ಲಿ ನೈತಿಕತೆ ಇಲ್ಲದೆ ಮೊಂಡುತನದಿಂದ ವರ್ತಿಸುತ್ತಿರುವ ಮುಖ್ಯಮಂತ್ರಿಗಳು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ಬಿಜೆಪಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಪ್ರತ್ಯೇಕ ಸಭೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಕುಟುಂಬವೆಂದ ಮೇಲೆ ಅನೇಕ ಭಿನ್ನಾಭಿಪ್ರಾಯಗಳು ಇರುತ್ತವೆ. ನಮ್ಮದು ರಾಜಕೀಯ ಪಕ್ಷ ಇದಕ್ಕೆ ಹೊರತಾಗಿಲ್ಲ, ಎಲ್ಲವೂ ಕೂಡ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿ ಎಲ್ಲಾ ಭಿನ್ನಾಭಿಪ್ರಾಯಗಳನ್ನ ಬಗೆಹರಿಸಿಕೊಳ್ಳಲಾಗುವುದು ಎಂದು ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ನಗರಸಭೆ ಸದಸ್ಯ ಸಂತೋಷ, ಮುಖಂಡರಾದ ನಾರಾಯಣಗೌಡ, ಪ್ರಸನ್ನ ಕುಮಾರ್, ಶ್ರೀಕಾಂತ್, ಮಹೇಶ್, ಚನ್ನಕೇಶವ, ಪ್ರೀತಿರ್ವದನ್ ಇತರರು ಇದ್ದರು.
ರಾಜೀನಾಮೆ ಕೇಳುವ ನೈತಿಕತೆ ಇಲ್ಲ :
ಕೇಂದ್ರದ ಸಚಿವೆ ನಿರ್ಮಲ ಸೀತಾರಾಮ್ ಅವರನ್ನ ರಾಜೀನಾಮೆ ಕೇಳುವ ನೈತಿಕತೆ, ಕಾಂಗ್ರೆಸ್‌ಗೆ ಇಲ್ಲ, ಸಿದ್ದರಾಮಯ್ಯ ಅವರ ಮೇಲಿನ ಪ್ರಕರಣ ಹಾಗೂ ನಿರ್ಮಲಾ ಸೀತಾರಾಮನ್ ಅವರ ಮೇಲಿರುವ ಪ್ರಕರಣಗಳು ಬೇರೆ ಬೇರೆ ಎರಡು ಪ್ರಕರಣಗಳ ಬಗ್ಗೆ ಜನರಿಗೆ ತಿಳಿದಿದೆ ಎಂದು ಹೇಳಿದರು.
ನಿರ್ಮಲಾ ಸೀತಾರಾಮನ್ ಅವರ ಮೇಲೆ ಚುನಾವಣಾ ಸಂದರ್ಭದಲ್ಲಿ ಬಾಂಡ್ ಮತ್ತು ದೇಣಿಗೆ ಸಂಗ್ರಹ ವಿಚಾರವಾಗಿ ಪ್ರಕರಣ ದಾಖಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ದೇಣಿಗೆ ಪಡೆಯುವ ಹಕ್ಕಿದೆ. ಎಲ್ಲಾ ಪಕ್ಷಗಳು ಕೂಡ ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಹಾಗಾದರೆ ಎಲ್ಲಾ ರಾಜಕೀಯ ನಾಯಕರು ರಾಜೀನಾಮೆ ಕೊಡುತ್ತಾರಾ ಎಂದು ಪ್ರಶ್ನಿಸಿದರು. ಈ ರೀತಿ ಬುದ್ಧಿಹೀನ ರೀತಿ ಮಾತನಾಡಿ ರಾಜ್ಯದ ಜನರನ್ನ ದಾರಿತಪ್ಪಿಸುವ ಕೆಲಸ ಮಾಡಬಾರದು ಎಂದರು.
ಕಾಂಗ್ರೆಸ್ ಯಾವಾಗಲೂ ಮೊಸಳೆ ಕಣ್ಣೀರು ಸುರಿಸುವ ಪಕ್ಷ, ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ರಾಹುಲ್ ಗಾಂಧಿ ಮೀಸಲಾತಿಯನ್ನು ವಿರೋಧ ಮಾಡುತ್ತಾರೆ. ದೇಶದ ಕಾನೂನು ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡುವುದಿಲ್ಲ, ಇವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.