ಸಿದ್ದರಾಮಯ್ಯ ಮೇಲೆ ಸುಳ್ಳು ಆರೋಪ ಮಾಡಿದ್ದಾರಲ್ಲಾ, ಇದನ್ನು ನೀವು ಸಹಿಸಿಕೊಳ್ಳುತ್ತೀರಾ ?: ವರುಣ ಕ್ಷೇತ್ರದ ಮತದಾರರನ್ನು ಪ್ರಶ್ನಿಸಿದ ಸಿದ್ದರಾಮಯ್ಯ

cm siddaramaiah
Published on

ಮೈಸೂರು: ಈ ಸಿದ್ದರಾಮಯ್ಯ ಬಡವರಿಗೆ ಅನ್ಯಾಯ ಮಾಡಿದ್ದಾನಾ? ಯಾವತ್ತಾದರೂ ನಿಮ್ಮಿಂದ ಒಂದು ರೂ. ಲಂಚ ಪಡೆದ ನಿದರ್ಶನ ಇದೆಯಾ? ಇಂಥ ಸಿದ್ದರಾಮಯ್ಯ ಮೇಲೆ ಸುಳ್ಳು ಆರೋಪ ಮಾಡಿದ್ದಾರಲ್ಲಾ, ಇದನ್ನು ನೀವು ಸಹಿಸಿಕೊಳ್ಳುತ್ತೀರಾ...?

ಇಂಥದೊಂದು ಪ್ರಶ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವ ಕ್ಷೇತ್ರ ವರುಣದ ಜನರ ಮುಂದಿಟ್ಟು ಎಮೋಷನಲ್ ಪ್ಲೇ ಕಾರ್ಡ್ ಮಾಡುವ ಮೂಲಕ ಜನರ ಮನಗೆಲ್ಲುವ ಪ್ರಯತ್ನ ಮಾಡಿದರು. ತಾಯೂರು ಗೇಟ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವರುಣ ಕ್ಷೇತ್ರ ವ್ಯಾಪ್ತಿಯ 501.81 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮುಡಾ ಹಗರಣದ ನಂತರ ಇದೇ ಪ್ರಥಮ ಬಾರಿಗೆ ಸ್ವ ಕ್ಷೇತ್ರದ ಜನರೊಂದಿಗೆ ಸಿದ್ದರಾಮಯ್ಯ ಭಾವನಾತ್ಮಕವಾಗಿ ಮಾತನಾಡಿದರು.

ಕಳೆದ 42 ವರ್ಷಗಳಿಂದ ಶಾಸಕನಾಗಿ, ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ, ಪ್ರತಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಾನು ನಿಮ್ಮಿಂದ ಹಣ ಪಡೆದಿದ್ದರೆ 42 ವರ್ಷ ರಾಜಕಾರಣದಲ್ಲಿ ಇರೋಕೆ ಆಗುತಿತ್ತಾ? 9 ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತಿತ್ತಾ? ನನ್ನ ಜೀವನ ತೆರೆದ ಪುಸ್ತಕ ಎಂದರು.

ಇವತ್ತು ಮುಡಾ ಪ್ರಕರಣ, ಮುಡಾ ಪ್ರಕರಣ ಅನ್ನುತ್ತಿದ್ದಾರೆ. ನನ್ನ ಬಾಮೈದ ಅವರ ತಂಗಿಗೆ ಹರಿಸಿಣ ಕುಂಕುಮಕೋಸ್ಕರ ನೀಡಿದ ಜಮೀನನ್ನು ದೊಡ್ಡ ವಿಚಾರ ಮಾಡಿದ್ದಾರೆ. ಈ ವಿವಾದದ ಹಿನ್ನೆಲೆಯಲ್ಲಿ ನಿವೇಶನವೇ ಬೇಡ ಎಂದು ವಾಪಾಸ್ ನೀಡಿದೆ. 42 ವರ್ಷ ಗಳಿಂದ ರಾಜಕಾರಣದಲ್ಲಿದ್ದರೂ ನನಗೊಂದು ಸ್ವಂತ ಮನೆ ಇಲ್ಲ. ನಾನು ವಾಸ ಮಾಡುತ್ತಿರುವುದು ಮರಿಸ್ವಾಮಿ ಮನೆಯಲ್ಲಿ. ಇದೀಗ ಮೈಸೂರಿನಲ್ಲಿ ಮನೆ ಕಟ್ಟಿಸುತ್ತಿದ್ದೇನೆ. ಆ ಮನೆ ಕಟ್ಟಿಸಲು ಪ್ರಾರಂಭವಾಗಿ ಮೂರು ವರ್ಷ ಆಯಿತು. ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆ ಎಂದರೆ ನೀವೇ ನಮ್ಮ ಮಾಲೀಕರು, ರಾಜಕೀಯವಾಗಿ ನೀವೇ ಆಶೀರ್ವಾದ ಮಾಡಿದವರು ಎಂದು ಭಾವನಾತ್ಮವಕಾಗಿ ಹೇಳಿದರು.

ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಹೊಟ್ಟೆಉರಿಗೋಸ್ಕರ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ನನ್ನನ್ನು ಕಂಡರೆ ಹೊಟ್ಟೆಉರಿ. ನನ್ನ ವರ್ಛಸ್ಸು ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ವರ್ಛಸ್ಸು ಕೊಡುವವರು ನೀವು. ಹಾಗಾಗಿ ಪ್ರತಿಪಕ್ಷದವರ ಷಡ್ಯಂತ್ರಕ್ಕೆ ಹೆದರುವುದಿಲ್ಲ. ನಾನು ಎಲ್ಲ ಷಡ್ಯಂತ್ರ ಸೋಲಿಸುತ್ತೇನೆ. ಅವರ ಆಟಗಳಿಗೆ ಜಗ್ಗಲ್ಲ, ಬಗ್ಗಲ್ಲ. ಸಾಮಾಜಿಕ ನ್ಯಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.

ಕೇಂದ್ರದಲ್ಲಿರುವ ಮೋದಿ ಸರ್ಕಾರವಾಗಲಿ, ರಾಜ್ಯದಲ್ಲಿದ್ದ ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಸರ್ಕಾರವಾಗಲಿ, ಜನ ಕಲ್ಯಾಣ ಮಾಡದೆ ಲೂಟಿ ಮಾಡಿ ಹೋದರು. ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ, ಬಡವರ ವಿರೋಧಿಯಾಗಿದೆ. ಮೂರು ಬಾರಿ ಪ್ರಧಾನಿ ಆಗಿರುವ ಮೋದಿ ಕೊಟ್ಟ ಮಾತಿನಂತೆ ನಡೆದ ಉದಾಹರಣೆ ಇದೆಯಾ ಹೇಳಿ? ಇಷ್ಟು ವರ್ಷ ಪ್ರಧಾನಿಯಾಗಿ ಮೋದಿ ಬಡಪರ ಪರವಾಗಿ ಒಂದೇ ಒಂದು ಯೋಜನೆ ಜಾರಿ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವವರು ನಾವು. ನಾವು ನಮ್ಮ ಪಾಲಿನ ತೆರಿಗೆ ಪಡೆಯಲು ಭಿಕ್ಷೆ ಬೇಡಬೇಕಾ? ಮೊನ್ನೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಅತಿ ಹೆಚ್ಚು ತೆರಿಗೆ ಪಾಲು ಕೊಟ್ಟಿರುವ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಾತ್ರ ಕೇವಲ ಆರು ಸಾವಿರ ಕೋಟಿ ಕೊಟ್ಟು ಅನ್ಯಾಯ ಮಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ರಹೀಂಖಾನ್, ಎನ್.ಎಸ್. ಭೋಸರಾಜು, ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ಶಾಸಕರಾದ ಡಿ.ರವಿಶಂಕರ್, ದರ್ಶನ್ ದ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಡಿ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ತಾಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಣಿಕೃಷ್ಣ, ಉಪಾಧ್ಯಕ್ಷೆ ಬಸಮ್ಮ ರಂಗಸ್ವಾಮಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net