

ಮೈಸೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ರಾಜಕೀಯವಾಗಿ ಮುಗಿಸುವ ಉದ್ದೇಶದಿಂದಲೇ ಜಾರಿ ನಿರ್ದೇಶನಾಲಯ(ಇಡಿ) ಮೊದಲಾದ ತನಿಖಾ ಸಂಸ್ಥೆಗಳನ್ನು ಸಿದ್ದರಾಮಯ್ಯ ವಿರುದ್ಧ ಬಳಸಲಾಗುತ್ತಿದ್ದು, ಇದರ ವಿರುದ್ಧ ದೆಹಲಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು
ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಷಾ, ಎಚ್.ಡಿ.ಕುಮಾರಸ್ವಾಮಿ ಹುನ್ನಾರ ನಡೆಸಿದ್ದು, ಜಾರಿ ನಿರ್ದೇಶನಾಲಯ(ಇಡಿ) ಮೊದಲಾದ ತನಿಖಾ ಸಂಸ್ಥೆಗಳನ್ನು ಸಿದ್ದರಾಮಯ್ಯ ವಿರುದ್ಧ ಬಳಸಲಾಗುತ್ತಿದೆ. ಇದರ ವಿರುದ್ಧ ದೆಹಲಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಅಹಿಂದ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನಾ ಸಭೆ ನಡೆಸಿ ರಾಷ್ಟ್ರಪತಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.24ರಂದು ಬೆಳಗ್ಗೆ 11ಕ್ಕೆ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ದುಂಡು ಮೇಜಿನ ಸಭೆ ಕರೆದು, ದೆಹಲಿ ಹೋರಾಟದ ರೂಪುರೇಷೆ, ದಿನಾಂಕ ನಿಗದಿಗೊಳಿಸಲಾಗುವುದು. ಇದರಲ್ಲಿ ಪ್ರಗತಿಪರ ಚಿಂತಕರು, ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಿಎಂ ವಿರುದ್ಧ ದೂರು ನೀಡಿರುವವರು ಮುಡಾ ಹಗರಣದಲ್ಲಿನ ಇತರರ ಬಗ್ಗೆ ಏಕೆ ದೂರು ನೀಡುತ್ತಿಲ್ಲ. ಇತರರ ಬಗ್ಗೆ ಏಕೆ ದನಿ ಎತ್ತುತ್ತಿಲ್ಲ. ಕೇವಲ ಸಿಎಂ ಪತ್ನಿ ಪಾರ್ವತಮ್ಮ ಅವರನ್ನೇ ಏಕೆ ಗುರಿಯಾಗಿರಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಈಗಾಗಲೇ ಮುಡಾ ಹಗರಣ ಕುರಿತಂತೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಆದರೆ ಎಲ್ಲವೂ ಮುಗಿಯಿತೆಂಬಂತೆ ದೂರುದಾರ ಸ್ನೇಹಮಯಿ ಕೃಷ್ಣ ಮೊದಲಾದವರು ಮಾತನಾಡುತ್ತಿದ್ದಾರೆ. ಇದರು ಸರಿಯಲ್ಲ ಎಂದರು.
ತಾವು ಮತ್ತೆ ರಾಜ್ಯದ ಸಿಎಂ ಆಗುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದರರ್ಥ ಇವರು ಮೋದಿ ಹಾಗೂ ಅಮಿತ್ ಷಾ ಅವರೊಡನೆ ಶಾಮೀಲಾಗಿ, ರಾಜ್ಯದಲ್ಲಿನ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸುವುದಾಗಿದೆ. ಆದರೆ, ಇದಕ್ಕೆ ರಾಜ್ಯದ ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದರು.
ಮುಡಾ ಹಗರಣ ಸಿವಿಲ್ ಪ್ರಕರಣ. ಇದರಲ್ಲಿ ಇಡಿ ಅಧಿಕಾರಿಗಳಿಗೆ ಏನು ಕೆಲಸ? ಬೆಂಗಳೂರಿನಲ್ಲಿ ಕೆರೆಗಳನ್ನು ನುಂಗಿ ಸಾವಿರಾರು ಅಪಾಟ್ಮೆರ್ಂಟ್ ಕಟ್ಟಲಾಗಿದೆ. ಅವುಗಳ ಬಗ್ಗೆ ಗಮನಹರಿಸುವ ಬದಲು ಕೇವಲ 3.16 ಎಕರೆ ಜಾಗ, 14 ನಿವೇಶನಗಳ ಬಗ್ಗೆ ತಲೆಕೆಡಿಸಿಕೊಂಡು ಹುಡುಕಾಟ ನಡೆಸಿರುವುದು ಹಾಸ್ಯಾಸ್ಪದ ಎಂದರು.
ಸಂಸದರಾಗಿ ಆಯ್ಕೆಯಾದ ಬಳಿಕ ಯದುವೀರ್ ಯಾವುದೇ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಪಾಲ್ಗೊಂಡಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಏನೂ ಕೊಡುಗೆ ನೀಡಿಲ್ಲ. ಬದಲಾಗಿ ಮೇಲಿನವರ ಆಣತಿಯಂತೆ ಕೇವಲ ಸಿಎಂ ರಾಜೀನಾಮೆ ನೀಡಲಿ ಎನ್ನುತ್ತಿರುವುದು ಸರಿಯಲ್ಲ ಎಂದರು.
ಮುಖಂಡರಾದ ಯೋಗೇಶ್ ಉಪ್ಪಾರ್, ರವಿನಂದನ್, ಮಂಜುಳಾ ಮಂಜುನಾಥ್, ಚಂದ್ರು ವಿಶ್ವಕರ್ಮ, ಲೋಕೇಶ್ ಕುಮಾರ್ ಮಾದಾಪುರ, ಎಸ್. ರಾಜೇಶ್ ಸುದ್ದಿಗೋಷ್ಠಿಯಲ್ಲಿದ್ದರು.