ಸಿದ್ದರಾಮಯ್ಯ ಜತೆಗಿದ್ರೆ ಕಡಲೇಕಾಯಿಯೂ ಸಿಗಲ್ಲ

R Ashok
Published on

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಜತೆಗೆ ಇದ್ದರೆ, ಕಡಲೇಕಾಯಿಯೂ ಸಿಗಲ್ಲವೆಂದು ಕಾಂಗ್ರೆಸ್ಸಿಗರೆ, ಚರ್ಚಿಸುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದ ಬಾರ್ ಅಂಡ್ ರೆಸ್ಟೋರೆಂಟ್, ವೈನ್, ಲಿಕ್ಕರ್ ಶಾಪ್, ಪಬ್‌ಗಳಿಗೆ ದರ ಫಿಕ್ಸ್‌ ಮಾಡಿದೆ. ಒಂದೇ ವಾರದಲ್ಲಿ 18 ಕೋಟಿ ರೂ. ಸಂಗ್ರಹಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದೆ. ಅಧಿಕಾರಿಗಳಿಗೆ ದುಡ್ಡಿನ ದಾಹ ಅತಿಯಾಗಿದೆ ಎಂದು ಮಾಲೀಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದರು.

ಅಬಕಾರಿ ಕಮಿಷನರ್, ಡಿಸಿಗೆ ಎಷ್ಟು ಹಣ ಕೊಟ್ಟಿದ್ದೇವೆಂದು ಲಿಕ್ಕರ್ ಅಸೋಸಿಯೇಷನ್ ಹೇಳಿದ್ದು, ನ. 20ಕ್ಕೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಅಬಕಾರಿ ಅಕ್ರಮಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಅವರನೇಕೆ ಹಿಡಿದು ಜೈಲಿಗೆ ಕಳಿಸುತ್ತಿಲ್ಲ ಎಂದು ಕಿಡಿಕಾರಿದರು.

ಈ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ದೂರು ಕೊಟ್ಟಾಗ ದಾಖಲೆ ಕೇಳಿದರೆ, ಬಿಜೆಪಿ ಸರ್ಕಾರಕ್ಕೆ ನೀಡಲಿಲ್ಲ. ಇನ್ನೂ ಸಿದ್ದರಾಮಯ್ಯ ಪಂಚೆ ಎತ್ತಿಕೊಂಡು ಊರೂರು ಸುತ್ತಿದರು. ಈಗ ಶೇ. 60ರಷ್ಟು ಕೊಡಬೇಕೆಂದು ಪತ್ರ ಬರೆದಿದ್ದಾರೆ. ದಾಖಲೆ ಕೊಡುವವರ‌್ಯಾರು ಎಂದು ಪ್ರಶ್ನಿಸಿದರು.

ರಾಜ್ಯದ ಭ್ರಷ್ಟ ಕಾಂಗ್ರೆಸ್ ವಿರುದ್ಧ ಅಧಿವೇಶನದಲ್ಲಿ ದೊಡ್ಡ ಚರ್ಚೆ ಮಾಡುತ್ತೇವೆ. ಕಳೆದ ಬಾರಿ ಉತ್ತರಿಸದೆ, ಚರ್ಚೆಯಿಂದಲೇ ಪಲಾಯನ ಮಾಡಿದರು. ಈ ಬಾರಿ ಪರ್ಮನೆಂಟ್ ಆಗಿ ಗಂಟು ಮೂಟೆ ಕಟ್ಟಲಿದ್ದಾರೆ. ಸರ್ಕಾರ ಪತನವಾಗುತ್ತದೆಂದು ಮಠಾಧೀಶರು, ಜೋತಿಷಿಗಳು ಹೇಳುತ್ತಿದ್ದಾರೆ ಎಂದರು.

ಜಮೀರ್ ಯಾರ ಕಡೆ ಎಂಬುದೇ ಮೊದಲು ಗೊತ್ತಾಗುತ್ತಿಲ್ಲ. ಚನ್ನಪಟ್ಟಣದಲ್ಲಿ ಡಿಕೆಶಿ ನಾನೇ ಸಿಎಂ ಅಂತ ಪ್ರಚಾರ ಮಾಡಿದ್ದಾರೆ. ಹಿಂದೆ ಜೆಡಿಎಸ್‌ನೊಂದಿಗೆ ಮೈತ್ರಿಯಾದಾಗ 5 ವರ್ಷ ನಮ್ಮದೇ ಸರ್ಕಾರ ಎಂದಿದ್ದರು. ಈಗ ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತದೆಂಬ ಯಾವ ಗ್ಯಾರಂಟಿಯಿಂದ ಹೇಳಿದ್ದಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರಕ್ಕೆ ಬಂದಾಗಿನಿಂದ ಒಂದೂ ಅಡಿಗಲ್ಲು, ಭೂಮಿ ಪೂಜೆ ಮಾಡಿಲ್ಲ. ನಮ್ಮ ತಲೆಯ ಮೇಲೆ ಜನ ಕಲ್ಲು ಹಾಕ್ತಾರೆಂದು ಕೆಲ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಒಬ್ಬರಿಗೂ ಅನುದಾನ ಬಿಡುಗಡೆಯಾಗಿಲ್ಲ. ದಾವಣಗೆರೆಯಲ್ಲಿ ಒಬ್ಬರು ಆತ್ಮಹತ್ಯೆ ಮಾಡ್ಕೊತೀನಿ ಎಂದಿದ್ದಾರೆ. ಫ್ರೀ ಕೊಟ್ಟರೆ, ನಾವು ಚೊಂಬು ಎತ್ತಿಕೊಂಡು ಹೋಗಬೇಕಾಗುತ್ತೆಂದು ರಾಯರೆಡ್ಡಿ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲೇ ಇದ್ದರೆ, ಮುಂದಿನ ಚುನಾವಣೆಯಲ್ಲಿ ಡೆಪಾಸಿಟ್ ಬರಲ್ಲವೆಂದು ಕೆಲವರು ನೊಂದು ನುಡಿದಿದ್ದಾರೆ. ಇದನ್ನು ಬಿಜೆಪಿಯವರು ಹೇಳುತ್ತಿಲ್ಲ ಎಂದು ತಿರುಗೇಟು ನಡೆಸಿದರು.

ಮಹಾರಾಷ್ಟ್ರ ಚುನಾವಣೆಗೆ 700 ಕೋಟಿ ರೂ. ಹಣ ಹೋಗಿರುವ ಕುರಿತು ಪ್ರಧಾನಿಗೆ ಮಾಹಿತಿ ಇರಲ್ವಾ?. ಇದನ್ನೆಲ್ಲ ನರೇಂದ್ರಮೋದಿ ಅವರು ಹೇಳಿ ಮಾಡಿಸಿದ್ದಾರಾ?. ಆದರೂ ಪಿಎಂ ಮೇಲೆ ಏಕವಚನದಲ್ಲಿ ಮುಗಿ ಬೀಳುತ್ತ್ತಾರೆ. ಕಳೆದ 25 ವರ್ಷಗಳಿಂದ ಡಿಕೆಶಿ ಬರೀ ಸಾಕ್ಷಿ ಕೇಳುತ್ತಾರೆ. ಕಾಂಗ್ರೆಸ್ ಹಗರಣ ಒಂದೊಂದಾಗಿ ಬಯಲಾಗುತ್ತಿದ್ದರೂ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಂಬೇಡ್ಕರ್ ಭಾರತದಲ್ಲೇ ಸ್ಥಾಪಿತವಾದ ಬೌದ್ಧ ಧರ್ಮ ಸ್ವೀಕರಿಸಿದರೆ ಹೊರತು ಪರಕೀಯ ಧರ್ಮವನಲ್ಲ. ಸಂಸತ್ತಿನಲ್ಲಿ ಗಲಾಟೆ ಮಾಡುತ್ತಾರೆ ಅವರನ್ನು ಗೆಲ್ಲಿಸಬೇಡಿ ಎಂದಿದ್ದು ಕಾಂಗ್ರೆಸ್ ಹೇಳುವ ದೊಡ್ಡ ನಾಯಕ ನೆಹರು. ಅವರ ವಿರುದ್ಧ ಭಾಷಣ ಮಾಡಿ ಮಹಾರಾಷ್ಟ್ರದಲ್ಲಿ ಸೋಲಿಸಿದರು. ಈಗ ಸಂವಿಧಾನ ಪುಸ್ತಕ ಹಿಡಿದು ನಿತ್ಯ ಓಡಾಡುತ್ತಿದ್ದಾರೆ. ಕಾಂಗ್ರೆಸ್ಸಿಗರಿಂದ ಬಾಬಾ ಸಾಹೇಬರಿಗೆ ಆದ ಮೋಸ ಎಲ್ಲರಿಗೂ ತಿಳಿದ ವಿಚಾರ ಎಂದರು.

ಎಂಎಲ್ಸಿ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಸಂಪತ್‌ಕುಮಾರ್, ಮಲ್ಲಿಕಾರ್ಜುನ್, ನಾಗರಾಜ್ ಬೇದ್ರೆ, ಶಂಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net