ಸಿದ್ದರಾಮಯ್ಯ ಕುರಿ ಚರ್ಬಿ ತಿಂದು ಕೊಬ್ಬು: ಸಂಸದ ಪ್ರತಾಪಸಿಂಹ ವಾಗ್ದಾಳಿ

pratap simha 3
Published on

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿ ಚರ್ಬಿ ತಿಂದು ಕೊಬ್ಬು ಹೆಚ್ಚಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಟ್ವೀಟ್ ಮಾಡುವುದು ಅವರ ಘನತೆಗೆ ತರವಲ್ಲ ಎಂದು ಸಂಸದ ಪ್ರತಾಪ ಸಿಂಹ ಕಿಡಿಕಾರಿದರು.
ಗುಜರಾತಿನ ಸಿಂಹ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಾಗಲೆಲ್ಲ ಸಿದ್ದರಾಮಯ್ಯ ಊಳಿಡುವ ಕೆಲಸ ಮಾಡುತ್ತಿರುತ್ತಾರೆ. ನರೇಂದ್ರ ಮೋದಿ ಬಂಡೀಪುರದಲ್ಲಿ ಸಫಾರಿ ಮಾಡಿದ ವೇಳೆ ‘ಮಾರಿಬಿಡುತ್ತಾರೆಂದು ಹುಲಿ ಕಾಣಲಿಲ್ಲ’ ಎಂಬುದಾಗಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಆದರೆ ಸೇನೆಯ 3 ಹೆಲಿಕ್ಯಾಪ್ಟರ್‌ಗಳು ಏಕಕಾಲಕ್ಕೆ ಶಬ್ದ ಮಾಡಿಕೊಂಡು ಇಳಿದಾಗ ಯಾವ ಕಾಡುಪ್ರಾಣಿಗಳು ತಾನೆ ಇರಲು ಸಾಧ್ಯ ಎನ್ನುವ ಕನಿಷ್ಠ ಜ್ಞಾನವೂ ಅವರಿಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
5 ವರ್ಷ ಮುಖ್ಯಮಂತ್ರಿಯಾಗಿದ್ದ ಅವರು ವಾರಕ್ಕೊಮ್ಮೆ ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗುತ್ತಿದ್ದರು. ಒಂದು ದಿನವಾದರೂ ಸಮೀಪದಲ್ಲಿಯೇ ಇರುವ ಬಂಡೀಪುರ, ನಾಗರಹೊಳೆಗೆ ಹೋಗಿ ಪ್ರಾಣಿ, ಪಕ್ಷಿ, ಹಾಡಿಜನರ ಸ್ಥಿತಿಗತಿಯನ್ನು ವೀಕ್ಷಿಸಿದ್ದರೇ, ಕಾಳಜಿ ತೋರಿದ್ದರೇ ಎಂದು ಪ್ರಶ್ನಿಸಿದರು.
ದೂರದ ದೆಹಲಿಯಿಂದ ಪ್ರಧಾನಿ ಬಂಡೀಪುರಕ್ಕೆ ಬಂದರೆ ವ್ಯಂಗ್ಯವಾಡುತ್ತಾರೆ. ಕುರಿ ಚರ್ಬಿಯ ಕೊಬ್ಬು ಹೆಚ್ಚಾಗಿ ಹೀಗೆಲ್ಲ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು.
ಹಾಸ್ಯಾಸ್ಪದ:
ರಾಜ್ಯದಲ್ಲಿ ಅಮೂಲ್ ಮತ್ತು ಕೆಎಂಎಫ್ ವಿಲಿನಗೊಳ್ಳುವುದಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಆದರೂ ಚುನಾವಣೆ ಸಂದರ್ಭದಲ್ಲಿ ಲಾಭ ಪಡೆಯಲು ಜೆಡಿಎಸ್ ಮತ್ತು ಕಾಂಗ್ರೇಸ್ ಅಪಪ್ರಚಾರ ಮಾಡುತ್ತಿವೆ. ಗೋಹತ್ಯೆ ಪರ ಮಾತನಾಡುವವರು ನಂದಿನಿ ಉಳಿಸುವ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಪ್ರತಾಪ ಸಿಂಹ ಹೇಳಿದರು.
ಈ ಹಿಂದೆ ತೀರ್ಥಹಳ್ಳಿಯಲ್ಲಿ ದನಗಳ್ಳರನ್ನು ಶೂಟ್‌ಔಟ್ ಮಾಡಿದಾಗ ಪೊಲೀಸ್ ಪೇದೆಯನ್ನು ಅಮಾನತುಪಡಿಸಿ ಮೃತನ ಕುಟುಂಬಕ್ಕೆ ಪರಿಹಾರ ಕೊಟ್ಟು ಗೋ ಕಳ್ಳಸಾಗಣೆ, ಗೋಹತ್ಯೆಗೆ ಪ್ರೇರಣೆ ನೀಡಿದ್ದೀರಿ. ರಾಜ್ಯದಲ್ಲಿ ಹುಲಿಯಂತಿದ್ದ ಲೋಕಾಯುಕ್ತವನ್ನೇ ಬಲಿ ಕೊಟ್ಟಿದ್ದೀರಿ. ಇದರಿಂದ ನೀವು ಯಾರ ಪರ ಇದ್ದೀರಿ ಎನ್ನುವುದು ತಿಳಿಯುತ್ತದೆ ಎಂದು ಸಿದ್ದರಾಮಯ್ಯ ಅವರನ್ನು ಛೇಡಿಸಿದರು.
ಮೊದಲು ಹಿಂದಿ ಹೇರಿಕೆ ಅಂದರು. ಈಗ ಅಮೂಲ್ ಹೇರಿಕೆ ಅಂತ ಸುಳ್ಳು ಹರಡುತ್ತ ಬೊಬ್ಬೆ ಹಾಕಲಾಗುತ್ತಿದೆ. ಆದರೆ ರಾಜ್ಯದಲ್ಲಿ ಹಲವು ವರ್ಷಗಳಿಂದ ಹೆರಿಟೇಜ್, ದುಡ್ಲಾ, ಮಿಲ್ಕಿ ಮಿಸ್ಟ್, ಆರೋಗ್ಯ ಸೇರಿದಂತೆ ಅನೇಕ ಕಂಪನಿಯ ಹಾಲು ಮಾರಾಟವಾಗುತ್ತಿದೆ. ಅವುಗಳೇನು ನಂದಿನಿಯ ಅಕ್ಕತಂಗಿಯರಾ ಎಂದು ಪ್ರಶ್ನಿಸಿದರು.
ತಿರುಪತಿಯಲ್ಲಿ ಲಾಡು ತಯಾರಿಸಲು ನಂದಿನಿ ತುಪ್ಪ ಹೋಗುತ್ತಿದೆ. ನಮ್ಮ ನಂದಿನಿ ತಯಾರಿಕೆಗಳು ಇತರ ರಾಜ್ಯಗಳಿಗೆ ಹೋಗುವುದನ್ನು ಬೇಡವೆಂದು ಹೇಳಲು ಆಗುತ್ತದೆಯೇ? ಹಾಗೆಯೇ ನಂದಿನಿಗಿಂತಲೂ ಮೊದಲಿನಿಂದ ಇರುವ ಅಮೂಲ್ ಮಾರಾಟವಾಗಬಾರದೆಂದು ಹೇಳಲು ಅಗುತ್ತದೆಯೇ? ಜನರಿಗೆ ಯಾವುದು ಇಷ್ಟ ಆಗುತ್ತದೆಯೋ ಅದನ್ನು ಖರೀದಿಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net