ಸಿದ್ದರಾಮಯ್ಯ ಅವರದು ವರ್ಸ್ಟ್ ಸರ್ಕಾರ

CTDD..02
Published on

ಚಿತ್ರದುರ್ಗ: ಸರಣಿ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಸಿಲುಕಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಕೊಪ್ಪಳ ಮಾರ್ಗ ಚಿತ್ರದುರ್ಗ ಹೊರವಲಯ ಕ್ಯಾದಿಗೆರೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿತ ಹದಗೆಟ್ಟಿದೆ. ಅಭಿವೃದ್ಧಿಗೆಂದು ಒಂದು ರೂ.ಅನುದಾನ ಬಿಡುಗಡೆ ಮಾಡಿಲ್ಲ. ಶಾಸಕರು ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದು, ಸಿದ್ದರಾಮಯ್ಯ ಅವರಂಥ ವರ್ಸ್ಟ್ ಸರ್ಕಾರ ಬೇರೊಂದು ಇಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಜನರು ರಾಜಕಾರಣಿಗಳನ್ನು ಅಟ್ಟಾಡಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.
ಎಸ್‌ಐಟಿ, ಸಿಐಡಿ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಮತಕ್ಕಾಗಿ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಮೀನು ಕೊಡುವ ಬದಲು ಮೀನು ಹಿಡಿಯುವುದನ್ನು ಕಲಿಸಬೇಕಿದೆ. ಎಸ್‌ಇಪಿ, ಟಿಎಸ್‌ಪಿಯಡಿ ಮೀಸಲಿದ್ದ ದಲಿತರ ಹಣವನ್ನು ಬಳಸಿರುವ ಈ ಸರ್ಕಾರ ಮೋಸಕ್ಕೆ ಹೆಸರಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ.ಶಿವಕುಮಾರ್ ಲೂಟಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಗೊಂದಲಗಳಿಲ್ಲ. ಪಿಎಸ್‌ಐ ಪರಶುರಾಮ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಲೂಟಿಗೆ ಸರ್ಕಾರದ ಒತ್ತಡವಿದೆ
ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್‌ರಾವ್ ಮಾತನಾಡಿ, ಲೂಟಿಗೆ ಸರ್ಕಾರ ಒತ್ತಡ ಹಾಕುತ್ತಿದೆ. ಪೊಲೀಸ್ ಇಲಾಖೆ ಸಂಪೂರ್ಣ ವೀಕ್ ಆಗುತ್ತಿದೆ. ಪೊಲೀಸರಿಗೆ ರಕ್ಷಣೆ ಕೊಡುವಂಥ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಲಕ್ಷಾಂತರ ರೂ. ಕೊಡದಿದ್ದರೆ ಯಾವುದೇ ಪೋಸ್ಟಿಂಗ್ ಸಿಗದು. ಇದು ಜನರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಶಾಸಕ, ಅವರ ಪುತ್ರ 30 ಲಕ್ಷ ರೂ. ಕೇಳಿದ್ದರಿಂದ ನೊಂದು ಪಿಎಸ್‌ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬದವರು ಹೇಳಿದ್ದಾರೆ.
ಬೇರೆ ಇಲಾಖೆಗಳಲ್ಲಿ ಗುತ್ತಿಗೆ, ಪರ್ಸೆಂಟೇಜ್ ನಡೆಯುತ್ತಿದ್ದರೆ, ಪೊಲೀಸರು ಜನಸಾಮಾನ್ಯರಿಂದ ವಸೂಲಿ ಮಾಡುವಂತಾಗಿದೆ. ಬೆಂಗಳೂರಲ್ಲಿ ಪೋಸ್ಟಿಂಗ್‌ಗೆ ಕೋಟ್ಯಂತರ ರೂ., ಜಿಲ್ಲೆಗಳಲ್ಲಿ ಲಕ್ಷಾಂತರ ರೂ.ಕೊಡಬೇಕಿದೆ. ಸಿಎಂ ಸ್ಟ್ರಾಂಗ್ ಆಗಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ ಎಂದರು.
ರಾಜ್ಯ ಪೊಲೀಸ್ ಸಂಘದ ಅಧ್ಯಕ್ಷ ಶಶಿಧರ್, ಬಿಜೆಪಿ ನಗರ ಅಧ್ಯಕ್ಷ ನವೀನ್ ಚಾಲುಕ್ಯ, ವಕ್ತಾರ ಛಲವಾದಿ ತಿಪ್ಪೇಸ್ವಾಮಿ, ಜಗದೀಶ್ ಚಲವಾದಿ, ವೆಂಕಟೇಶ ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net