ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಟಿಪ್ಪು ಸಂಸ್ಕೃತಿ ಬಿಂಬಿತ: ಆರ್.ಅಶೋಕ್

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಟಿಪ್ಪು ಸಂಸ್ಕೃತಿ ಬಿಂಬಿತ: ಆರ್.ಅಶೋಕ್
Published on

ಹಾಸನ: ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಟಿಪ್ಪು ಸಂಸ್ಕೃತಿ ಬಿಂಬಿತವಾಗುವ ಜೊತೆಗೆ ಭಯೋತ್ಪಾದಕರ ತಾಣವಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಶೋಕ್ ಹೋಟೆಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯದವನ್ನು ಓಲೈಕೆಗಾಗಿ ರಾಜ್ಯದಲ್ಲಿ ಹಿಂದೂಗಳನ್ನು 2ನೇ ದರ್ಜೆಯ ಜನರನ್ನಾಗಿ ನೋಡುತ್ತಿದ್ದಾರೆ. ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸರ್ಕಾರ ಈಗಲೂ ತಡೆಲು ವಿಫಲರಾಗಿದ್ದಾರೆ. ಇದಕ್ಕೆಲ್ಲ ಈ ಲೋಕಸಭೆ ಚುನಾವಣೆಯಲ್ಲೇ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆಸಲು ಮುಸ್ಲಿಮರಿಗೆ ವೀಸಾ, ಪಾಸ್‌ಪೋರ್ಟ್ ಸಿಕ್ಕಂತಾಗಿದೆ. ಬುಧವಾರ ರಾಮನವಮಿ ಪ್ರಯುಕ್ತ ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಮುಸ್ಲಿಂ ಯುವಕರು ಕಾರು ತಡೆದು ಹಲ್ಲೆ ನಡೆಸಿ, ಜೈಶ್ರೀರಾಮ್ ನಡೆಯಲ್ಲ, ಅಲ್ಲ ಅಕ್ಬರ್ ಮಾತ್ರ ನಡೆಯೋದು ಎಂದು ದಬ್ಬಾಳಿಕೆ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದರೂ ಅವರನ್ನು ಬಂಧಿಸಲು ಮೀನಾಮೇಷ ಎಣಿಸಿ, ಅವರ ಪರ ವಕಾಲತ್ತು ವಹಿಸಲು ಸಚಿವರು ನಾ ಮುಂದು ತಾ ಮುಂದು ಎಂದು ಹೊರಟಿದ್ದರು. ಅದೇ ರೀತಿ ರಾಮೇಶ್ವರ ಕೆಫೆಯಲ್ಲಿ ನಡೆಸ ಬಾಂಬ್ ಸ್ಫೋಟ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡು ಹೋಟೆಲ್‌ಗಳ ನಡುವೆ ನಡೆದ ಗಲಾಟೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು ಎಂದರು
ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿ ಅವಮಾನ ಮಾಡಲಾಯಿತು. ಈ ಎಲ್ಲಾ ಬೆಳವಣಿಗಳಿಂದ ನಾವು ಪಾಕಿಸ್ತಾನದಲ್ಲಿ ಇದ್ದೀವಾ ಅಥವಾ ಭಾರತದಲ್ಲಿ ಇದ್ದೀವಾ ಎಂಬ ಪ್ರಶ್ನೆ ಕಾಡುತ್ತಿದ್ದು, ಹಿಂದೂಗಳು ಭಯದಲ್ಲಿ ಬದುಕ ಬೇಕಬೇಕಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಪ್ರಣೇಶ್, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ,ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ.ಗೌಡ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಯೋಗಾರಮೇಶ್, ಮತ್ತಿತರರು ಇದ್ದರು.

ಕಾಂಗ್ರೆಸ್‌ಗೆ ನಾಯಕತ್ವ ಇಲ್ಲ:
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಕಾಂಗ್ರೆಸ್‌ನವರಿಗೆ ಹೊಟ್ಟೆಗೆ ಮೆಣಸಿನಕಾಯಿ ಇಟ್ಟ ಹಾಗೆ ಆಗಿದೆ. ಹೀಗಾಗಿ ಚುನಾವಣೆ ಎದುರಿಸಲು ಯಾವುದೇ ವಿಷಯಗಳಿಲ್ಲದೆ ಕೇವಲ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್‌ಗೆ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಕನಿಷ್ಠ ಪ್ರಧಾನಿ ಅಭ್ಯರ್ಥಿ ಯಾವು ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ನಾವು ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿ ಚುನಾವಣೆ ಎದುರಿಸುತ್ತಿದ್ದರೂ ಅವರಿಗೆ ರಾಹುಲ್ ಗಾಂಧಿ ಹೆಸರು ಹೇಳಿಕೊಂಡು ಚುನಾವಣೆ ನಡೆಸಲು ಆಗುತ್ತಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ದೃಷ್ಟಿಬಟ್ಟಂತೆ ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ಗೆ ಈ ಬಾರಿ ಅದೂ ಇಲ್ಲದಂತೆ ಮಾಡುತ್ತೇವೆ. ಅಲ್ಲಿ ನಮ್ಮ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಗಿದ ಅಧ್ಯಾಯ :
ರಾಜ್ಯದಲ್ಲಿ ಒಂದೆರಡು ಕಡೆ ಸಣ್ಣಪುಟ್ಟ ಗೊಂದಲಗಳಿದ್ದು, ಅವುಗಳನ್ನು ಇನ್ನ ಒಂದೆರಡು ಮೂರು ದಿನಗಳಲ್ಲಿ ಬಗೆಹರಿಸಲಾಗುವುದು ಆದರೆ ಶಿವಮೊಗ್ಗದಲ್ಲಿ ಈಶ್ವರಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ ಅದು ಮುಗಿದ ಅಧ್ಯಾಯ ಇನ್ನೇನಿದ್ದರೂ ಅವರು ಬಿಜೆಪಿಯ ಪ್ರತಿಸ್ಪರ್ಧಿ ಎಂದು ಹೇಳಿದರು. ಇಡೀ ದೇಶದಲ್ಲಿ ಮೋದಿ ಅವರ ಗಾಳಿ ಬೀಸುತ್ತಿರುವುದರಿಂದ ಮೋದಿ ಹೆಸರು ಹೇಳಿಕೊಂಡು ಸುಲಭವಾಗಿ ಗೆಲುವು ಸಾಧಿಸಬಹುದು ಎಂದು ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಗೊಂದಲಗಳು ಏರ್ಪಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net