ಚಾಮರಾಜನಗರ: ಅನುದಾನದ ಅಭಾವದಿಂದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಕಾಡುತ್ತಿರುವುದರ ನಡುವೆ ಇಲ್ಲೊಂದು ಶಾಲೆ ಮಾದರಿ ಎನ್ನುವಂತೆ ಅಭಿವೃದ್ಧಿ ಕಾಣುತ್ತಿದೆ.
ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇತರೆ ಶಾಲೆಗಳಿಗೆ ಪ್ರೇರಣೆಯಾಗುವಂತೆ, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಪ್ರಗತಿ ಹೊಂದುತ್ತಿದೆ. ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 180 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದೆ ಸೌಕರ್ಯಗಳು ಇಲ್ಲದೆ ಶಾಲೆ ಸೊರಗಿತ್ತು. ಆದರೆ ಸರ್ಕಾರದ ನೆರವನ್ನೇ ಅವಲಂಬಿಸದೆ ಸಂಘ-ಸಂಸ್ಥೆಗಳ ಸಹಕಾರ, ದಾನಿಗಳು, ಗ್ರಾಮಸ್ಥರ ಸಹಕಾರದೊಂದಿಗೆ ಹೊಸ ರೂಪ ಪಡೆದುಕೊಳ್ಳುತ್ತಿದೆ.
ಟಿವಿಎಸ್‌ನಿಂದ ದೊಡ್ಡ ನೆರವು: ಗ್ರಾಮದ ಶಾಲೆಯ ಅಭಿವೃದ್ಧಿಗೆ ಟಿವಿಎಸ್ ಮೋಟಾರ್ ಕಂಪನಿಯ ಅಂಗ ಸಂಸ್ಥೆಯಾದ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್‌ನಿಂದ ದೊಡ್ಡಮಟ್ಟದ ನೆರವು ದೊರೆತಿದೆ. ಸುಮಾರು 33 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಶಾಲೆ ಅಭಿವೃದ್ಧಿ ಮಾಡಲಾಗುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕರು, ಅಂಗವಿಕಲ ಮಕ್ಕಳಿಗಾಗಿ ಪ್ರತ್ಯೇಕವಾಗಿ ಹೈಟೆಕ್ ಶೌಚಗೃಹ ಕಟ್ಟಿಸಿಕೊಡಲಾಗಿದೆ. ಶಾಲೆಯ ಛಾವಣಿಗೆ ಸಿಮೆಂಟ್ ಹಾಕಿಸಿಕೊಡಲಾಗಿದೆ. ಶಾಲೆಯ ಕಾಂಪೌಂಡ್, ತರಗತಿ ಕೊಠಡಿಗಳಿಗೆ ಬಣ್ಣ ಬೆಳೆದು, ನಲಿ-ಕಲಿ ಚಿತ್ರಗಳನ್ನು ರಚನೆ ಮಾಡಲಾಗಿದೆ. ುಟ್‌ಪಾತ್ ಮಾಡಲಾಗಿದೆ. ಮಕ್ಕಳಿಗಾಗಿ ಆಟಿಕೆಗಳಾದ ಜಾರುವ ಬಂಡಿ ಅಳವಡಿಸಲಾಗಿದೆ. ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ಒದಗಿಸಿಕೊಟ್ಟಿದೆ.
ಗ್ರಾಮಸ್ಥರ ಸಖತ್ ಸಹಕಾರ: ಸಿದ್ದಯ್ಯನಪುರ ಗ್ರಾಮಸ್ಥರು ಊರಿನ ಸರ್ಕಾರಿ ಶಾಲೆಯ ಮೇಲೆ ಇಟ್ಟಿರುವ ಅಭಿಮಾನಕ್ಕೆ ಬೆಲೆ ಕಟ್ಟಲಾಗದು. ಶ್ರೀನಿವಾಶನ್ ಸರ್ವೀಸಸ್ ಟ್ರಸ್ಟ್‌ನಿಂದ ಶಾಲೆ ಅಭಿವೃದ್ಧಿಗೆ ಅನುದಾನ ನೀಡುವಾಗ ಶೇ.20ರಷ್ಟು ಕೊಡುಗೆಯನ್ನು ಗ್ರಾಮಸ್ಥರು ನೀಡಬೇಕೆಂದು ತಿಳಿಸಲಾಗಿತ್ತು. ಅದರಂತೆ ಗ್ರಾಮಸ್ಥರು ಪ್ರತಿ ಮನೆಯಿಂದಲೂ ಹಣ ಕೊಟ್ಟಿದ್ದಾರೆ. ಕೆಲವು ಸಾಮಗ್ರಿಗಳನ್ನು ತೆಗೆದುಕೊಟ್ಟಿದ್ದಾರೆ. ಅಲ್ಲದೇ, ಈ ಶಾಲೆಗೆ ಸರ್ಕಾರದಿಂದಲೂ ಸಹ ಅನುದಾನ ದೊರೆತಿರುವುದು ಸಂತಸದ ವಿಚಾರ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಸಭಾಂಗಣ, ಶೌಚಗೃಹ ನಿರ್ಮಾಣ ಮಾಡಿಕೊಡಲಾಗಿದೆ. ಗ್ರಾಮ ಪಂಚಾಯಿತಿ ಸಹಕಾರವೂ ಇದೆ.
ಕ್ರಿಯಾಶೀಲ ತಂಡ:
ಶಾಲೆಯ ಎಸ್‌ಡಿಎಂಸಿ ಮತ್ತು ಶಿಕ್ಷಕರ ತಂಡ ಕ್ರಿಯಾಶೀಲತೆಯಿಂದ ಕೂಡಿದೆ. ಶಾಲೆಯ ಅಭಿವೃದ್ಧಿಗೆ ಶಿಕ್ಷಕರೆಲ್ಲರೂ ಸೇರಿ ತಮ್ಮಿಂದ ಆಗುವಷ್ಟು ಹಣ ಹಾಕಿದ್ದಾರೆ. ಈ ಕುರಿತು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಆಂಜನೇಯ ಮಾತನಾಡಿ, ನಮ್ಮೂರ ಶಾಲೆ ಮಾದರಿ ಶಾಲೆಯಾಗುತ್ತಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ನಡೆಯುತ್ತಿರುವ ಕಾಮಗಾರಿ ಕಮಿಟಿ ಅಧ್ಯಕ್ಷ ಈಶ್ವರ್ ಮಾತನಾಡಿ, ಶಾಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ ಎಂದು ತಿಳಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ್ ಮಾತನಾಡಿ, ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್, ಗ್ರಾಮಸ್ಥರು, ಎಸ್‌ಡಿಎಂಸಿ ಮತ್ತು ದಾನಿಗಳ ನೆರವು ಶಾಲೆಯ ಚಿತ್ರಣವನ್ನೇ ಬದಲಾಯಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಏ.4ರಂದು ಉದ್ಘಾಟನೆ:
ಶಾಲೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಏ.4ರಂದು ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಭಾಗವಹಿಸುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಲೆಯಲ್ಲಿ ಕೊಠಡಿ ಸಮಸ್ಯೆ ಬಗೆಹರಿಸಲು ಗಮನಹರಿಸಬೇಕಿದೆ. ಒಟ್ಟು 6 ಕೊಠಡಿಗಳಿದ್ದು, ಇನ್ನೂ 2 ಕೊಠಡಿಗಳ ಅಗತ್ಯವಿದೆ. ಹೀಗಾಗಿ 1 ತರಗತಿಯನ್ನು ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಸಲಾಗುತ್ತಿದೆ.
ಶಾಲೆಯ ಅಭಿವೃದ್ಧಿಗೆ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ನೆರವು ಕೋರಿ ಮನವಿ ಮಾಡಿದ್ದೇವು. ಅವರಿಂದ ಸಹಾಯ ದೊರೆಯಿತು. ಇದಕ್ಕೆ ಪೂರಕವಾಗಿ ಗ್ರಾಮಸ್ಥರು ಕೈ ಜೋಡಿಸಿದರು. ಎಸ್‌ಡಿಎಂಸಿ ತಂಡ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ್ ಅವರ ಶ್ರಮದಿಂದ ನಮ್ಮ ಶಾಲೆ ಹೊಸ ರೂಪ ಪಡೆದುಕೊಳ್ಳುತ್ತಿದೆ.
ಪುಟ್ಟಸ್ವಾಮಿ, ಮುಖ್ಯಶಿಕ್ಷಕ
ಶಾಲೆ ಅಭಿವೃದ್ಧಿಯಿಂದ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಯಾಗುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಪಾಲಕರಿಗೂ ತುಂಬಾ ಸಂತೋಷವಾಗಿದೆ.
ಎಸ್.ಎಂ.ಸಿದ್ದರಾಜು, ಎಸ್‌ಡಿಎಂಸಿ ಅಧ್ಯಕ್ಷ