ಸಿದ್ದನಾಯಕನ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!

07-murder3
Published on

ಎಚ್.ಡಿ. ಕೋಟೆ: ತಾಲೂಕಿನ ನೇರಳೆ ಗ್ರಾಮದಲ್ಲಿ ಯುವಕನ ಮೃತದೇಹ ದೊರೆತಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಇಬ್ಬರು ಯುವಕರು ಸಂಚು ರೂಪಿಸಿ ಅಮಾಯಕ ಯುವಕನನ್ನು ದಾರುಣವಾಗಿ ಕೊಲೆಗೈದಿರುವುದು ಬೆಳಕಿಗೆ ಬಂದಿದೆ.


ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಸಿ. ಪ್ರಕಾಶ್ ಅವರ ಅಧಿಕಾರದ ಅವಧಿಯಲ್ಲಿ ಮನೆ ಕೊಡಲಿಲ್ಲ ಎಂಬ ದ್ವೇಷಕ್ಕೆ ಅವರ ವಿರುದ್ಧ ಕೊಲೆ ಆರೋಪ ಬರುವಂತೆ ಮಾಡಲು ಅದೇ ಗ್ರಾಮದ ನಂಜುಂಡನ ಮಗ ಭೀಮ ಮತ್ತು ಜಯರಾಮು ಮಗ ದಿನೇಶ್ ಅಮಾಯಕ ಯುವಕನನ್ನು ಕೊಲೆಗೈದು ಇದೀಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.


ಏನಿದು ಘಟನೆ?: ಗ್ರಾಮದ ನಿವಾಸಿ ಪ್ರಕಾಶ್ ಅವರ ಪತ್ನಿಗೆ ಸಿದ್ದನಾಯಕ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಗಲಾಟೆ ನಡೆದು ರಾಜಿ ಸಂಧಾನ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಗುರುವಾರ ಬೆಳಗ್ಗೆ ಗ್ರಾಮದ ಕಬಿನಿ ನಾಲೆಯ ಬಳಿ ಸಿದ್ದನಾಯಕನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಮೃತನ ಕುಟುಂಬಸ್ಥರು ಪ್ರಕಾಶ್ ಹಾಗೂ ಕೆಲವರ ವಿರುದ್ಧ ಕೊಲೆ ದೂರು ನೀಡಿದ್ದರು.


ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಕಥೆ ಬಯಲಾಗಿದೆ. ಪ್ರಕಾಶ್ ಗ್ರಾಪಂ ಮಾಜಿ ಅಧ್ಯಕ್ಷರಾಗಿದ್ದಾಗ ತಮಗೆ ಮನೆ ನೀಡಲಿಲ್ಲ ಎಂಬ ಕಾರಣಕ್ಕೆ ಆರೋಪಿಗಳಾದ ಭೀಮ ಮತ್ತು ದಿನೇಶ್ ಸಿದ್ದನಾಯಕನನ್ನು ಬಳಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು.


ಗಲಾಟೆ ನಡೆದದ್ದನ್ನೇ ಅಸ್ತ್ರವಾಗಿಸಿಕೊಂಡ ಈ ಇಬ್ಬರು ಸಿದ್ದನಾಯಕನನ್ನು ಪುಸಲಾಯಿಸಿ ಕಬಿನಿ ನಾಲೆ ಬಳಿ ಎಳೆದೊಯ್ದಿದ್ದರು. ಬಳಿಕ 112 ಪೊಲೀಸ್ ಸಹಾಯವಾಣಿಗೆ ಕರೆಮಾಡಿ ಎಂ.ಸಿ.ಪ್ರಕಾಶ್ ನನ್ನ ಕೊಲೆಗೆ ಪ್ರಯತ್ನಿಸುತ್ತಿದ್ದಾನೆ ಎಂದು ಕರೆ ಮಾಡಿಸಿದ್ದಾರೆ. ಸಾಲದೆಂಬಂತೆ ಸಿದ್ದನಾಯಕನ ಕೈಯಲ್ಲಿ ಎಂ.ಸಿ.ಪ್ರಕಾಶ್ ಹೆಸರು ಬರೆಸಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿ ಕೊಲೆ ಆರೋಪ ಪ್ರಕಾಶ್ ಮೇಲೆ ಬರುವಂತೆ ಸಂಚು ರೂಪಿಸಿದ್ದರು. ನಂತರ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸರು 112ಕ್ಕೆ ಬಂದ ಕರೆ ಆಧರಿಸಿ ತನಿಖೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.

ಪ್ರಕಾಶ್ ಹಾಗೂ ಕೆಲವರ ವಿರುದ್ಧ ಸಿದ್ದನಾಯಕ ಸಂಬಂಧಿಕರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಬಂಧಿಸಿದ್ದ ಮೂವರನ್ನು ಬಿಡುಗಡೆ ಮಾಡಿದ್ದು, ಕೊಲೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net