

ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣದಲ್ಲಿ ಶುಕ್ರವಾರ ರಾತ್ರಿ 22. 4 ಮಿ.ಮೀ. ಮಳೆ ಸುರಿದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆದರೂ ಹಲವೆಡೆ ಗುಡಿಗೂ ಸಿಡಿಲಿನ ಹಾಗೂ ಬಾರಿ ಬಿರುಗಾಳಿಗೆ ಹಾನಿ ಉಂಟಾಗಿದೆ. ಬುಕ್ಕಾಪಟ್ಟಣ ಹೋಬಳಿಯ ಯರದಕಟ್ಟೆ ಮಜಿರೆ ಗಿಣ್ಣಪ್ಪನಹಟ್ಟಿ ಗ್ರಾಮದ ಮಂಜುನಾಥ್ ಎಂಬುವವರ ಗುಡಿಸಲಿಗೆ ಸಿಡಿಲು ಬಡಿದು ದಿನಬಳಕೆ ವಸ್ತುಗಳು, ದಿನಸಿ ಸಾಮಗ್ರಿ, 12 ಚೀಲ ರಾಗಿ, ಎರಡು ಚೀಲ ಅಕ್ಕಿ ಸೇರಿ ಮನೆಯ ದಾಖಲಾತಿ, 50 ಗ್ರಾಂ ಚಿನ್ನ ಹಾಗೂ 3 ಲಕ್ಷ ನಗದು ಸುಟ್ಟು ಕರಕಲಾಗಿದೆ. ಹಸು ಮತ್ತು ಕರುವಿಗೆ ಗಾಯಗಳಾಗಿವೆ.
ರಾತ್ರಿ 10.30ರ ಸುಮಾರಿನಲ್ಲಿ ಗುಡಿಸಲಿಗೆ ಸಿಡಿಲು ಬಡಿದಿದೆ. ತಕ್ಷಣ ಎಲ್ಲರೂ ಆಚೆ ಕಡೆ ಓಡಿ ಬಂದಿದ್ದು, ನೋಡ ನೋಡುತ್ತಿದ್ದಂತೆಯೇ ಇಡೀ ಗುಡಿಸಲು ಭಸ್ಮವಾಗಿದೆ. ಕುಟುಂಬಸ್ಥರನ್ನು ನೇರಳೆಗುಡ್ಡ ಗ್ರಾಪಂ ಸಿಬ್ಬಂದಿ ಯರದಕಟ್ಟೆ ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಕಂದಾಯ ನಿರೀಕ್ಷಕ ಉಮೇಶ್, ಗ್ರಾಮ ಲೆಕ್ಕಾಧಿಕಾರಿ ಲತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಳೆ ಆರ್ಭಟಕ್ಕೆ ಹಲವು ಕಡೆ ಅಡಕೆ, ತೆಂಗಿನ ಮರಗಳು, ವಿದ್ಯುತ್ ಕಂಬಗಳು ಧರೆಗುರಳಿವೆ. ಕೆಲವು ಕಡೆ ಮನೆ ಸೀಟು ಹಾರಿ ಹೋಗಿವೆ.