ಸಿಡಿಲು ಬಡಿದು ಬಾಲಕ ಸಾವು

H31 Shidlu Akash
Published on

ಹುಬ್ಬಳ್ಳಿ: ದನ ಮೇಯಿಸಲು ಹೊಲಕ್ಕೆ ತೆರಳಿದ್ದ ವೇಳೆ ಸಿಡಿಲು ಬಡಿದು ಬಾಲಕ ಮೃತಪಟ್ಟ ದಾರುಣ ಘಟನೆ ಇಲ್ಲಿನ ಅಮರಗೋಳದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಅಮರಗೋಳ ಚಿಕ್ಕೇರಿ ಪ್ಲಾಟ್ ನಿವಾಸಿ ಆಕಾಶ ಸಹದೇವ ಸಾಯಣ್ಣವರ (14) ಮೃತಪಟ್ಟವನು. ದನ, ಕುರಿ ಮೇಯಿಸಿಕೊಂಡು ಮನೆಯ ಕಡೆಗೆ ಬರುತ್ತಿದ್ದಾಗ ಸಿಡಿಲು ಬಡಿದಿದೆ. ಸ್ಥಳೀಯರು ಕೂಡಲೆ ಆತನನ್ನು ಕಿಮ್ಸ್​ಗೆ ಕರೆದೊಯ್ದರಾದರೂ ಬಾಲಕ ಬದುಕುಳಿಯಲಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಎಪಿಎಂಸಿ- ನವನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕಡುಬಡತನದಲ್ಲಿ ಇರುವ ಕುಟುಂಬಕ್ಕೆ ಪುಟ್ಟ ಬಾಲಕ ಹಾಲು ಮಾರಾಟ ಮಾಡುವ ಮೂಲಕ ನೆರವಾಗಿದ್ದ. ಬಾಲಕನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net