

ಚಾಮರಾಜನಗರ: ಕಾಡುಹಂದಿಗಳ ಬೇಟೆಗಾಗಿ ಆಹಾರದಲ್ಲಿ ಸಿಡಿಮದ್ದನ್ನು ಹಸುಗಳು ತಿಂದು ಬಾಯಿ ಛಿದ್ರಗೊಂಡು ಸಾಯುತ್ತಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ರಾಮಶೆಟ್ಟಿ(45), ಸೋಮಣ್ಣ(45) ಬಂಧಿತ ಆರೋಪಿಗಳು. ಇವರಿಂದ 34 ಸಿಡಿಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಸಂಪರ್ಕದಲ್ಲಿದ್ದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು.
ಜಿಲ್ಲೆಯ ರಾಮಾಪುರ, ಹನೂರು, ಕೊಳ್ಳೇಗಾಲ ಗ್ರಾಮಾಂತರ ಮತ್ತು ಕುದೇರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಗ್ರಾಮಗಳ ಹೊರವಲಯಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡುಹಂದಿಗಳನ್ನು ಬೇಟೆಯಾಡಲು ದುಷ್ಕರ್ಮಿಗಳು ಆಹಾರದೊಳಗೆ ಸಿಡಿಮದ್ದು ಇಡುತ್ತಿದ್ದರು. ಮೇವು ಅರಸಿ ಬರುತ್ತಿದ್ದ ಜಾನುವಾರುಗಳು ಇದನ್ನು ತಿಂದು ಬಾಯಿ ಛಿದ್ರಗೊಂಡು ಅಮಾನವೀಯವಾಗಿ ಸಾಯುತ್ತಿದ್ದವು. ಈ ಸಂಬಂಧ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು. ಹನೂರು ತಾಲೂಕಿನ ರಾಮಾಪುರದ ಭದ್ರಯ್ಯನಹಳ್ಳಿಯಲ್ಲಿ ಸಿಡಿಮದ್ದು ಇಟ್ಟಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಆರೋಪಿ ರಾಮಶೆಟ್ಟಿ ಸಿಡಿಮದ್ದು ತಯಾರಿಕೆ ಮಾಡುತ್ತಿದ್ದ. ಸೋಮಣ್ಣ ಸಿಡಿಮದ್ದನ್ನು ಮಾರಾಟ ಮಾಡುತ್ತಿದ್ದ. ಇವರ ಸಂಪರ್ಕದಲ್ಲಿದ್ದ ಮೂವರು ಹೆಸರು ಹೇಳಿದ್ದಾರೆ. ಅವರು ತಲೆ ಮರೆಸಿಕೊಂಡಿದ್ದು, ಇವರು ಸಿಡಿಮದ್ದನ್ನು ಬಯಲಿನಲ್ಲಿ ಇಡಲು ಸಂಚು ರೂಪಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಕೊಳ್ಳೇಗಾಲ ಡಿವೈಎಸ್ಪಿ ಧಮೇಂದ್ರ, ರಾಮಾಪುರ ಠಾಣೆಯ ಪೊಲೀಸ್ ನಿರೀಕ್ಷಕ ಶೇಷಾದ್ರಿ ಇದ್ದರು.
ಕುರಿ, ಮೇಕೆ ಕರುಳಿನೊಳಗೆ ನಾಡಬಾಂಬ್:
ಆರೋಪಿಗಳು ಸಿಡಿಮದ್ದು ತಯಾರಿಕೆ ಮಾಡುತ್ತಿದ್ದ ಕ್ರಮವೇ ಅಚ್ಚರಿಯಿಂದ ಕೂಡಿದೆ. ಇದಕ್ಕಾಗಿ ಮೇಕೆ ಕರುಳನ್ನು ಬಳಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕುರಿ, ಮೇಕೆ ಕರುಳಿನೊಳನ್ನು ಕತ್ತರಿಸಿ ಅದರೊಳಗೆ ಗನ್‌ಪೌಡರ್ ಇಟ್ಟು ಸಿಡಿಮದ್ದು ತಯಾರಿಕೆ ಮಾಡುತ್ತಿದ್ದರು. ಇದನ್ನು ಮೆಕ್ಕೆಜೋಳ ಅಥವಾ ಇತರೆ ಆಹಾರದ ಒಳಗೆ ಇಡುತ್ತಿದ್ದರು. ಸಿಡಿಮದ್ದುಗಳನ್ನು ಬಯಲಿನಲ್ಲಿ ಇಟ್ಟು ಕಾಡುಹಂದಿಗಳ ಬೇಟೆಯಾಡುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ.
ಪೊಲೀಸರಿಂದ ಕಾರ್ಯಾಚರಣೆ: ಆರೋಪಿಗಳ ಪತ್ತೆ ಮಾಡುವ ಸಲುವಾಗಿ ಎಸ್ಪಿ ಡಾ.ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಕೊಳ್ಳೇಗಾಲ ಡಿವೈಎಸ್ಪಿ ಧಮೇಂದ್ರ ಮಾರ್ಗದರ್ಶನದಲ್ಲಿ ರಾಮಾಪುರ ಠಾಣೆಯ ಪೊಲೀಸ್ ನಿರೀಕ್ಷಕ ಶೇಷಾದ್ರಿ ನೇತೃತ್ವದಲ್ಲಿ ಪಿಎಸ್‌ಐ ಲೋಕೇಶ್, ಸಿಎಚ್‌ಸಿಗಳಾದ ಗಿರೀಶ್, ಬಂಟಪ್ಪ, ಸಿಪಿಸಿಗಳಾದ ಪರಶುರಾಮ್, ರವಿಚೌವ್ಹಾಣ್, ದಯಾನಂದ ಪವಾರ್, ಶಹನ್ ಷಾ ಮಕಾನ್‌ದಾರ್, ಸಿ.ಮಹೇಂದ್ರ ಮತ್ತು ಕೊಳ್ಳೇಗಾಲ ಉಪ ವಿಭಾಗದ ಅಪರಾಧ ಪತ್ತೆ ತಂಡ ತನಿಖೆಯಲ್ಲಿ ಭಾಗವಹಿಸಿದೆ.
ಜಿಲ್ಲೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣಗಳಲ್ಲಿ ಸೆರೆ ಹಿಡಿದ ಆರೋಪಿಗಳಿಂದ ವಶ ಪಡಿಸಿಕೊಂಡ ಮಾಲುಗಳನ್ನು ಮಾಲೀಕರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು. ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ