

ಮಳವಳ್ಳಿ: ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸರಳವಾಗಿ ಸಿಡಿ ಹಬ್ಬವನ್ನು ಆಚರಿಸಲಾಗಿತ್ತು. ಪ್ರಸ್ತುತ ದಿನಗಳಲ್ಲೂ ಕರೊನಾ ಅಲೆ ಇರುವ ಬಗ್ಗೆಯೂ ಮಾಹಿತಿ ಇದ್ದು, ಸರ್ಕಾರದಿಂದ ಸದ್ಯದ ಮಟ್ಟಿಗೆ ಯಾವುದೇ ಮಾರ್ಗಸೂಚಿ ಇಲ್ಲದಿದ್ದರೂ ಕೋವಿಡ್ ನಿಯಮ ಪಾಲಿಸಿಕೊಂಡು ಹಬ್ಬ ಆಚರಣೆಗೆ ಸಹಕಾರ ನೀಡುವಂತೆ ತಹಸೀಲ್ದಾರ್ ಎಂ.ವಿಜಯಣ್ಣ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಿಡಿ ಹಬ್ಬದ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಪಟ್ಟಣದ ಎಲ್ಲಾ ಕೋಮಿನ ಯಜಮಾನರು ಹಾಗೂ ಮುಖಂಡಿರೊಡನೆ ಚರ್ಚಿಸಿ ಸಲಹೆಗಳನ್ನು ಪಡೆದರು.
ಯಜಮಾನ್ ಪ್ರಭು ಹಾಗೂ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಸಿಡಿ ಬಂಡಿ ಹೋಗುವ ಬಡಾವಣೆಯಲ್ಲಿ ಸೇತುವೆ ಕಿತ್ತುಹಾಕಿ ಕಾಮಗಾರಿ ನಡೆಸಲಾಗುತ್ತಿದೆ. ಅಧಿಕಾರಿಗಳು ಹಬ್ಬಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಿ ರಸ್ತೆ ಗುಂಡಿಗಳನ್ನು ಮುಚ್ಚಿ ಸಬೇಕು ಎಂದು ಸಲಹೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಚಿಕ್ಕರಾಜು ಮಾತನಾಡಿ, ಪ್ರಸ್ತುತ ವಿಧಾನ ಸಭಾ ಚುನಾವಣೆ ವರ್ಷವಾಗಿರುವುದರಿಂದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಪಟ್ಟಣದ ಅನಂತ್ ರಾಮ್ ವೃತ್ತದಲ್ಲಿ ದೊಡ್ಡಮೋರಿಯಲ್ಲಿ ಮಳೆ ಬಂದ ಸಂರ್ಭದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ. ಮುಖ್ಯಮಂತ್ರಿಗಳು ಪಟ್ಟಣಕ್ಕೆ ಬಂದಿದ್ದಾಗಗಲೂ ಮೋರಿ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಗಿತ್ತು. ವರದಿ ಕಳುಹಿಸಿ ಅನುದಾನ ನೀಡುವುದಾಗಿ ಹೇಳಿದ್ದರು. ಕೆಲ ಪುರಸಭೆ ಸದಸ್ಯರು ಮಾತ್ರ ಅಧಿಕಾರಿ ಕರೆತಂದು ವೀಕ್ಷಣೆ ಮಾಡಿಸಿ ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸುವುದಾಗಿ ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಆದರೆ ವರ್ಷ ಕಳೆದರೂ ಇಂದಿನವರೆಗೆ ಯಾವುದೇ ಪ್ರಗತಿ ಕಂಡಿಲ್ಲ. ಹಬ್ಬದ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವುದರಿಂದ ಇಲ್ಲಿನ ಸ್ಥಿತಿ ಇಡೀ ಪಟ್ಟಣಕ್ಕೆ ಕಳಂಕಕ್ಕೆ ಕಾರಣವಾಗುವುದರಿಂದ ಕೂಡಲೇ ಸೇತು ಕಾಮಗಾರಿ ನಡೆಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಸಿಡಿ ಬಂಡಿ ಎಳೆಯುವ ನೇತೃತ್ವ ವಹಿಸುವ ಮೊಗಣ್ಣ ಮಾತನಾಡಿ, ಸಿಡಿ ಹೋಗುವ ಬೀದಿಗಳಲ್ಲಿ ನಡೆಯುತ್ತಿರುವ ಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಈಗಿರುವ ಸ್ಥಿತಿಯಲ್ಲಿ ಇದ್ದರೆ ಸಿಡಿ ನಡೆಸಲು ಸಾಧ್ಯವಾಗದು, ತ್ವರಿತವಾಗಿ ಕಾಮಗಾರಿ ಮುಗಿಸಬೇಕು. ಗಂಗಮತಸ್ಥ ಬೀದಿಯಲ್ಲಿ ನಲ್ಲಿ ಗುಂಡಿಗಳನ್ನು ಮುಚ್ಚಿಸಬೇಕು. ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು. ಸಿಡಿ ಬಂಡಿ ಎಳೆಯುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಸಿದ್ಧಾರ್ಥ ನಗರದ ಮುಖಂಡ ಬಾಲರಾಜು ಮಾತನಾಡಿ, ಸಿಡಿ ಬಂಡಿ ದೇವಸ್ಥಾನ ಸುತ್ತಿಬರುವ ಜಾಗದಲ್ಲಿ ಕಾಂಪೌಂಡ್ ನಿರ್ಮಾಣವಾಗಿದ್ದು, ಗಟ ಹೊತ್ತು ಹೋಗುವಾಗ ನಮ್ಮ ಸಮುದಾಯದವರಿಗೆ ಇದರಿಂದ ತೊಂದರೆಯಾಗುತ್ತಿದೆ ಕಾಂಪೌಂಡ್ ತೆರವುಗೊಳಿಸಿ ಸೌಹಾರ್ದತವಾಗಿ ಹಬ್ಬ ನಡೆಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಮುಖಂಡರಾದ ಕಿರಣ್ ಶಂಕರ್ ಬೆಂಬಲ ವ್ಯಕ್ತಪಡಿಸಿದರು.
ಮುಖಂಡರ ಸಲಹೆ, ಅಭಿಪ್ರಾಯ ಆಲಿಸಿ ಮಾತನಾಡಿದ ತಹಸೀಲ್ದಾರ್, ಜ.31ರಂದು ದಂಡಿನ ಮಾರಮ್ಮ, ಫೆ.3 ಮತ್ತು 4 ರಂದು ಪಟ್ಟಲದಮ್ಮನ ಸಿಡಿ ಹಬ್ಬವನ್ನು ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ನಿಯಮಾನುಸಾರ ನಡೆಸಲಾಗುವುದು. ಸಿಡಿ ಹಬ್ಬದ ವಿಶೇಷ ಆಕರ್ಷಣೆಯಾಗಿರುವ ವಿವಿಧ ಕೋಮಿನ ಘಟಗಳ ಮೆರವಣಿಗೆ ನಿಗದಿತ ಸಮಯದಲ್ಲೇ ಸಾಗಲಿದೆ. ಹಬ್ಬದ ದಿನಗಳಲ್ಲಿ ವಿದ್ಯುತ್, ಕುಡಿಯುವ ನೀರು ಪುರೈಕೆ ಸೇರಿದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು. ಕಾಂಪೌಂಡ್ ತೆರವು ವಿಚಾರವಾಗಿ ಹಬ್ಬದ ನಂತರ ಎಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾಸಲಾಗುವುದು ಎಂದ ಅವರು, ವಿಜೃಂಭಣೆಯ ಸಿಡಿ ಹಬ್ಬ ಆಚರಣೆಗಾಗಿ ಯಾವುದೇ ಅಪಸ್ವರ ತೆಗೆಯದೆ, ಎಲ್ಲಾ ಕೊಮಿನವರು ಸಹಕರಿಸುಂತೆ ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಪ್ರಶಾಂತ್, ಮುಖ್ಯಾಧಿಕಾರಿ ಹರಿಪ್ರಸಾದ್, ತಾಪಂ ಇಒ ರಾಮಲಿಂಗಯ್ಯ, ಸಿಪಿಐ ರಾಜೇಶ್, ಮುಖಂಡರಾದ ಪಟೇಲರ ಕಿರಣ್ ಕುಮಾರ್, ಎಂ.ಎಚ್.ಕೆಂಪಯ್ಯ, ಎಂ.ಸಿ.ವಿರೇಗೌಡ ಇತರರು ಇದ್ದರು.