

ಚಿತ್ರದುರ್ಗ: ಜಿಲ್ಲಾಸ್ಪತ್ರೆಯ ಸಿಟಿ ಸ್ಕ್ಯಾನ್ ಮಷಿನ್ ಕಳೆದ ಕೆಲವು ದಿನಗಳಿಂದ ಕೆಟ್ಟಿದ್ದು, ರೋಗಿಗಳು ಪರದಾಡುತ್ತಿದ್ದಾರೆ. ವಿಚಾರ ಗಮನಕ್ಕೆ ಬಂದ ಕೂಡಲೇ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಅವರು ಜಿಲ್ಲಾಸ್ಪತ್ರೆಗೆ ಗುರುವಾರ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಪರಿಶೀಲನೆ ವೇಳೆ ನಿತ್ಯ ಎಷ್ಟು ಜನರಿಗೆ ಸ್ಕಾೃನಿಂಗ್ ಮಾಡಲಾಗುತ್ತಿದೆ. ಇನ್ನೂ ಏಕೆ ದುರಸ್ತಿಯಾಗಿಲ್ಲ. ಪದೇ ಪದೆ ಕೆಟ್ಟು ಹೋಗುತ್ತದೆ ಎಂಬುದು ಸಾಮಾನ್ಯ ದೂರಾಗಿದೆ. ಈ ರೀತಿಯಾಗಿ ಎಷ್ಟು ದಿನವಾಗಿದೆ. ಹೊಸ ಯಂತ್ರಕ್ಕೆ ಎಷ್ಟು ಮೊತ್ತವಾಗಲಿದೆ. ತೊಂದರೆಯಲ್ಲಿರುವ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಹೊಸ ಸಿಟಿ ಸ್ಕ್ಯಾನ್‌ಗೆ ಅಂದಾಜು 8ರಿಂದ 9 ಕೋಟಿ ರೂ. ಆಗಲಿದೆ. ರೋಗಿಗಳಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಲು ಬೇರೆಡೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ವೈದ್ಯರು ಮತ್ತು ಜಿಲ್ಲಾಸ್ಪತ್ರೆಯ ಸೀಲ್ ಇರುವ ಚೀಟಿ ಕೂಡ ನೀಡಲಾಗುತ್ತಿದೆ. ಅದಕ್ಕೆ ಆಸ್ಪತ್ರೆಯಿಂದಲೇ ವೆಚ್ಚ ಭರಿಸಲಾಗುವುದು ಎಂದು ಆರ್‌ಎಂಒ ಡಾ.ಆನಂದ್ ಪ್ರಕಾಶ್ ಮಾಹಿತಿ ನೀಡಿದರು.
ಇದೇ ವೇಳೆ ರೋಗಿಯೊಬ್ಬ, ಸರ್ ಈ ಆಸ್ಪತ್ರೆಯಲ್ಲಿ ಸರಿಯಾದ ಮಾಹಿತಿ ಕೊಡುವುದಿಲ್ಲ. ಸಿಟಿ ಸ್ಕಾೃನ್‌ಗೆ ಬರೆದುಕೊಟ್ಟ ಚೀಟಿ ತೋರಿಸಿದರೂ ನಿಗದಿತ ಖಾಸಗಿ ಆಸ್ಪತ್ರೆಗೆ 800 ರೂ. ಶುಲ್ಕ ಕಟ್ಟಿದ್ದೇನೆ ಎಂದು ದೂರಿದರು.
ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಈ ರೀತಿ ಎಷ್ಟು ರೋಗಿಗಳಿಗೆ ಆಗಿದೆ. ಯಾರಾದರೂ ಹಣ ಪಾವತಿಸಿದ್ದರೆ, ಅದನ್ನು ಹಿಂದಿರುಗಿಸಿ ಎಂದು ತಾಕೀತು ಮಾಡಿದರು.
ವಿವಿಧ ವೈದ್ಯರ ಚಿಕಿತ್ಸಾ ಕೊಠಡಿ, ರಕ್ತನಿಧಿ ಕೇಂದ್ರ, ವಾರ್ಡ್‌ಗಳಿಗೂ ಭೇಟಿ ನೀಡಿ ಖುದ್ದು ರೋಗಿಗಳನ್ನು ಮಾತನಾಡಿಸಿದರು. ಸರಿಯಾಗಿ ಚಿಕಿತ್ಸೆ, ಊಟ ನೀಡುತ್ತಿದ್ದಾರೆಯೇ? ಏನೇ ಸಮಸ್ಯೆ ಇದ್ದರೂ ಹೇಳಿಕೊಳ್ಳಿ ಎಂದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೂ ಭೇಟಿ ನೀಡಿದ ಅವರು, ಗುಣಮಟ್ಟದ ಚಿಕಿತ್ಸೆ ಒದಗಿಸಿ, ಹೊರಗಡೆ ಚೀಟಿ ಬರೆದುಕೊಟ್ಟರೆ ಗಮನಕ್ಕೆ ತನ್ನಿ ಎಂದು ರೋಗಿಗಳಿಗೆ ಸಲಹೆ ನೀಡಿದರು.
ಸಿಟಿ ಸ್ಕ್ಯಾನ್ ಸಮಸ್ಯೆ ಕುರಿತು ಮಾಹಿತಿ ಪಡೆದಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರಾಜ್ಯ ಪ್ರಾಧಿಕಾರ ಹಾಗೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.