

ಬೆಳಗಾವಿ: ಆಧುನಿಕ ಯುಗದಲ್ಲಿ ಮಹಿಳೆಯರು ತಮಗೆ ಸಿಕ್ಕ ಸ್ವಾತಂತ್ರೃವನ್ನು ಜವಾಬ್ದಾರಿಯಿಂದ ಬಳಸಬೇಕು ಎಂದು ಹೆಸರಾಂತ ಸಂಗೀತ ಕಲಾವಿದೆ ನಿರ್ಮಲಾ ಪ್ರಕಾಶ ಹೇಳಿದರು.
ವಿಪ್ರ ಮಹಿಳಾ ಮಂಡಳದಿಂದ ಭಾನುವಾರ ಲಯನ್ಸ್ ಕ್ಲಬ್‌ದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಹಿಳೆಯರು ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು. ನಮ್ಮ ಸಂಸ್ಕೃತಿ, ಆಚರಣೆಗಳನ್ನು ಮಕ್ಕಳಿಗೆ ಕಲಿಸುವಲ್ಲಿ ತಾಯಂದಿರ ಪಾತ್ರ ಅತಿ ಮುಖ್ಯ. ವಿಪ್ರ ಮಹಿಳಾ ಮಂಡಳ ಎಲ್ಲ ಆಚರಣೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ ಎಂದರು.
ಮೇಧಾ ಕುಲಕರ್ಣಿ ಗಣೇಶ ಸ್ತುತಿ ಪ್ರಸ್ತುತ ಪಡಿಸಿದರು. ಎಲ್ಲರಿಗೂ ಭಗವದ್ಗೀತೆ ವಿತರಿಸಲಾಯಿತು. ಮಾಧುರಿ ಇನಾಮದಾರ ಅವರು ಭಗವದ್ಗೀತೆಯ 2ನೇ ಅಧ್ಯಾಯ ಹೇಳಿದರು. ಅಶ್ವಿನಿ ಜೋಶಿ ಅರ್ಥ ವಿವರಿಸಿದರು. ವೀಣಾ ಹೆಗಡೆ ಪರಿಚಯಿಸಿದರು. ಭಾಗ್ಯಶ್ರೀ ಕುಲಕರ್ಣಿ ಸ್ವಾಗತಿಸಿದರು. ಶೀತಲ ರಾಜಪುರೋಹಿತ ನಿರೂಪಿಸಿದರು. ಹೇಮಾ ಕುಲಕರ್ಣಿ ವಂದಿಸಿದರು.