ಸಿಕ್ಕ ಅವಕಾಶ ಬಳಸಿ ಜನರ ಹಿತ ಕಾಪಾಡಿ

beldale sanman
Published on

ಬೀದರ್: ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಹಗಲಿರುಳು ದುಡಿದು ಜನರ ಹಿತ ಕಾಪಾಡಬೇಕು ಎಂದು ಜಿಲ್ಲಾ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಜಯಶಾಂತಲಿಂಗ ಶಿವಾಚಾರ್ಯರು ಹೇಳಿದರು.
ಪ್ರತಾಪನಗರದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ಪೂಜ್ಯರು ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರನ್ನು ಸನ್ಮಾನಿಸಿ ಆಶೀರ್ವದಿಸಿ ಮಾತನಾಡಿ, ಮೊದಲ ಬಾರಿ ಶಾಸಕರಾಗಿರುವ ಬೆಲ್ದಾಳೆ ಸಿಕ್ಕ ಅವಕಾಶದ ಸದ್ಬಳಕೆ ಮಾಡಿಕೊಂಡು ಸಂಪೂರ್ಣ ಹಳ್ಳಿಗಳಿಂದ ಕೂಡಿದ ದಕ್ಷಿಣ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರಾಜ್ಯದಲ್ಲೇ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ಎಂದು ಸಲಹೆ ನೀಡಿದರು.
ಈ ಹಿಂದೆ ಜಿಪಂ ಸದಸ್ಯರಾಗಿ, ಕೆಎಸ್ಐಐಡಿಸಿ ಅಧ್ಯಕ್ಷರಾಗಿ ಬೆಲ್ದಾಳೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಪರಿಣಾಮ ಪ್ರಸ್ತುತ ಶಾಸಕರಾಗಿ ಆಯ್ಕೆಯಾಗಿ ಜನರ ನೆಚ್ಚಿನ ನಾಯಕರಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಜನರ ಹಿತ ಕಾಪಾಡಲೆಂದೇ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸುವ ಕೆಲಸ ಮಾಡುವೆ. ಪೂಜ್ಯರ ಆಶೀರ್ವಾದ ಸದಾ ಇರಲಿ ಎಂದರು.
ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯ ಹಲಬರ್ಗಾ, ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ, ಶ್ರೀ ಶಾಂತವೀರ ಶಿವಾಚಾರ್ಯ, ಶ್ರೀ ಸಿದ್ದೇಶ್ವರ ಶಿವಾಚಾರ್ಯ, ಶ್ರೀ ಶಂಕರಲಿಂಗ ಶಿವಾಚಾರ್ಯ, ಶ್ರೀ ಚಂದ್ರಶೇಖರ ಶಿವಾಚಾರ್ಯ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ, ಶ್ರೀ ಗಂಗಾಧರ ಶಿವಾಚಾರ್ಯ, ಶ್ರೀ ಬಸವಲಿಂಗ ಶಿವಾಚಾರ್ಯ, ಶ್ರೀ ಚನ್ನಮಲ್ಲ ಸ್ವಾಮೀಜಿ, ಶ್ರೀ ಮುರುಘೇಂದ್ರ ಸ್ವಾಮೀಜಿ, ಪ್ರಮುಖರಾದ ಶಿವಕುಮಾರ ಸ್ವಾಮಿ, ಆಕಾಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net