

ಕೊಪ್ಪ: ಆಟೋ ಚಾಲಕ ಪ್ರದೀಪ್ ಸಾವು ಅನುಮಾನಾಸ್ಪ್ಪವಾಗಿದೆ. ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಪ್ರಕರಣ ಭೇದಿಸಲು ಗೃಹ ಸಚಿವರು ಸಿಒಡಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದಲ್ಲಿ ಭಾನುವಾರ ಎಎಸ್ಪಿ ಗುಂಜನ್ ಆರ್ಯ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸಹಾಯಕ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ತನಿಖೆ ನಡೆಸಲು ಇಲಾಖೆ ಆದೇಶಿಸಿದೆ. ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಇಲಾಖೆಯು ಈವರೆಗಿನ ತನಿಖಾ ಮಾಹಿತಿಯನ್ನು ಮಾಧ್ಯಮಗಳಲ್ಲೂ ಬಹಿರಂಗಪಡಿಸಿಲ್ಲ. ತನಿಖೆ ಚುರುಕುಗೊಳಿಸಲು ಹಲವು ಪಕ್ಷ, ಸಂಘಟನೆಗಳೂ ಒತ್ತಾಯಿಸಿವೆ. ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರದೀಪ್ ಯಾವುದೇ ವಿವಾದಗಳಿಗೆ ಒಳಗಾಗದೆ, ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೆ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆಟೋ ನಿಲ್ಲಿಸಿದ ಸೇತುವೆ ಸ್ಥಳದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ನೀರಿನ ರಭಸವಿಲ್ಲದಿದ್ದರೂ ಮೃತದೇಹ ಅಷ್ಟು ದೂರದಲ್ಲಿ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ನಂತರ ಸಾವಿನ ಸ್ಪಷ್ಟತೆ ನಿಖರವಾಗದಿದ್ದಲ್ಲಿ, ವಿಧಿವಿಜ್ಞಾನ ಇಲಾಖೆಯ ಪರಿಣತರಿಂದ ವರದಿಯನ್ನು ಅತಿ ಶೀಘ್ರದಲ್ಲಿ ತರಿಸಲು ಕ್ರಮ ಕೈಗೊಳ್ಳಬೇಕು. ಸಾವಿಗೆ ಬೇರೆಯವರೂ ಕಾರಣರಾಗಿದ್ದರೆ ಅಂಥವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.