

ಬೆಳಗಾವಿ: ಯಮಕನಮರಡಿ ಪೊಲೀಸ್ ಠಾಣೆ ಆವರಣದ ವಾಹನದಲ್ಲಿಟ್ಟ ಚಿನ್ನ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಹಾಲಿನ ಪೌಡರ್ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಮತ್ತೊಂದು ಎಫ್‌ಐಆರ್ ದಾಖಲಿಸಿದೆ. ಹೀಗಾಗಿ ಹಾಲಿನ ಪೌಡರ್ ಹಗರಣ ಮುಚ್ಚಿಹಾಕಲು ಮಧ್ಯಸ್ಥಿಕೆ ವಹಿಸಿ ಡೀಲಿಂಗ್ ನಡೆಸಿದ್ದ ಬೆಳಗಾವಿಯ ಸ್ಥಳೀಯ ಪೊಲೀಸ್ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.
ಪೊಲೀಸ್ ಇಲಾಖೆಯ ನಕಲಿ ಐಡಿ ಬಳಕೆ ಮಾಡಿಕೊಂಡು ಅಸಲಿ ಅಧಿಕಾರಿಗಳ ಮೂಲಕ ವ್ಯವಹಾರ ಕುದುರಿಸುತ್ತಿದ್ದ ಹುಬ್ಬಳ್ಳಿಯ ಕಿರಣ ಸಂಗನಗೌಡ ವೀರನಗೌಡರ ವಿರುದ್ಧ ಈವರೆಗೆ ಸಿಐಡಿಯಿಂದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 4 ಎಫ್‌ಐಆರ್ ದಾಖಲಾಗಿವೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ಕ್ಷೀರಭಾಗ್ಯ ಯೋಜನೆಯ 14 ಟನ್ ಹಾಲಿನ ಪೌಡರ್ ಪ್ಯಾಕೆಟ್ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ನಡೆಸುತ್ತಿದ್ದ ಪ್ರಕರಣವೂ ಈಚೆಗಷ್ಟೇ ಸಿಐಡಿಗೆ ವರ್ಗಾವಣೆಯಾಗಿತ್ತು. ತನಿಖೆ ಆರಂಭಿಸಿದ್ದ ಸಿಐಡಿ ತಂಡ, ಜೂ.7ರಂದು ಮಹಾಲಿಂಗಪುರದ ಶಿವಾನಂದ ಅಂಗಡಿ ಎಂಬಾತನನ್ನು ಬಂಧಿಸಿ, ತನಿಖೆಗೊಳಪಡಿಸಿದ್ದರು. ಆಗ ಅಂದಿನ ಐಜಿಪಿ ಹಾಗೂ
ಬೆಳಗಾವಿ ನಗರದ ಹಲವು ಅಧಿಕಾರಿಗಳನ್ನು ಭೇಟಿಯಾಗಿದ್ದ ಕಿಂಗ್‌ಪಿನ್ ಕಿರಣ, ಲಕ್ಷಾಂತರ ರೂಪಾಯಿ ‘ವ್ಯವಹಾರ’ ಕುದಿಸಿರುವುದು ಬೆಳಕಿಗೆ ಬಂದಿತ್ತು.
ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ಈ ಡೀಲಿಂಗ್ ನಡೆದಿದ್ದ ಬಗ್ಗೆ ಸಾಕ್ಷಾೃಧಾರ ಕಲೆ ಹಾಕಿದ್ದ ಸಿಐಡಿಯ ಅಧಿಕಾರಿ ಪ್ರಕಾಶ ರಾಥೋಡ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಸಂಕೇಶ್ವರ, ಹಿರೇಬಾಗೇವಾಡಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆಗೆ ಕ್ರಮವಾಗಿ 14 ಹಾಗೂ 10 ದಿನ ಕಿರಣನನ್ನು ವಶಕ್ಕೆ ಪಡೆದಿದ್ದ ಸಿಐಡಿ ತಂಡ, ಆತನನ್ನು ಜು. 1ರಂದು ಬೆಳಗಾವಿಯ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಆರೋಪಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರಿಂದ, ಆಕ್ಷೇಪಣೆ ಸಲ್ಲಿಸಲು ಒಂದು ದಿನ ಸಿಐಡಿಗೆ ನ್ಯಾಯಾಲಯ ಕಾಲಾವಕಾಶ ನೀಡಿತ್ತು. ಇದಕ್ಕೆ ಸಿಐಡಿ ತಂಡ, ಆರೋಪಿತ ಕಿರಣನ ಇನ್ನಷ್ಟು ತನಿಖೆಗಾಗಿ ಮತ್ತೆ 10 ದಿನ ಕಸ್ಟಡಿಗೆ ನೀಡುವಂತೆ ಶುಕ್ರವಾರ ನ್ಯಾಯಾಲಯಕ್ಕೆ ಕೋರಿತ್ತು. ಈ ಬಗ್ಗೆ ನ್ಯಾಯಾಲಯ ಶನಿವಾರಕ್ಕೆ ಆದೇಶ ಕಾಯ್ದಿರಿಸಿದೆ.