ಸಿಐಡಿ ಪೊಲೀಸರಿಂದ ತನಿಖೆ ಮತ್ತಷ್ಟು ಚುರುಕು

cid police
Published on

ಮೈಸೂರು: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಅಧಿಕಾರಿಗಳು ಪತ್ರ ಬರೆದ ಪ್ರಕರಣ ಕುರಿತು ಸಿಐಡಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 4ಕ್ಕೆ ಏರಿಕೆ ಆಗಿದೆ.
ಮೈಸೂರಿನ ಕೆ.ಆರ್.ನಗರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಅಧಿಕಾರಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.


ಕೃಷಿ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ಪತ್ರವನ್ನು ಅಂಚೆ ಮೂಲಕ ರಾಜ್ಯಭವನಕ್ಕೆ ರವಾನೆ ಮಾಡಲಾಗಿತ್ತು. ಇದು ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿತ್ತು. ಈ ಕುರಿತು ಪ್ರತಿಪಕ್ಷಗಳು ಮಾಡಿದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.


ಈ ಹಿನ್ನೆಲೆಯಲ್ಲಿ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್ ನೇತೃತ್ವದ ತಂಡವು ಆ.9ರಂದು ಮೈಸೂರಿನ ಸರಸ್ವತಿಪುರಂ ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿತ್ತು. ಅದೇ ದಿನ ಮೈಸೂರಿನಲ್ಲಿ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿತ್ತು. ವಿಚಾರಣೆಯ ಬಳಿಕ ಬಿಡುಗಡೆ ಮಾಡಲಾಗಿದೆ. ಇದೀಗ ಇಬ್ಬರು ಅಧಿಕಾರಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.


ಸದರಿ ಪತ್ರ ಮೈಸೂರಿನ ಸರಸ್ವತಿಪುರಂ ಅಂಚೆ ಕಚೇರಿಯಿಂದ ಸ್ಪೀಡ್ ಪೋಸ್ಟ್ ಆಗಿತ್ತು. ಮಂಡ್ಯ ಜಿಲ್ಲೆ ಎಲ್ಲ ತಾಲೂಕುಗಳ ಸಹಾಯಕ ನಿರ್ದೇಶಕರೂ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಪತ್ರದ ಅಸಲಿಯತ್ತು ತಿಳಿಯುವ ಮೊದಲೇ ಮೇಲಿಂದ ಮೇಲೆ ಇಲಾಖೆಯ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ತನಿಖೆ ನಡೆಯುತ್ತಿರುವ ಆಯಾಮ ಗಮನಿಸಿದರೆ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರಿಗೂ ಬಂಧನ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net