ಸಿಎಎ ಕುರಿತ ತಪ್ಪು ಕಲ್ಪನೆ ದೇಶಕ್ಕೆ ಮಾರಕ

15KMT1
Published on

ಕುಮಟಾ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಸಮಾಜದಲ್ಲಿನ ತಪ್ಪು ಕಲ್ಪನೆಗಳು ದೇಶದ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದ ನೆಲ್ಲಿಕೇರಿ ಹಳೇ ಬಸ್ ನಿಲ್ದಾಣದಲ್ಲಿ ಬುಧವಾರ ಬಿಜೆಪಿಯಿಂದ ಮಹಾಸಂಪರ್ಕ ಅಭಿಯಾನದಡಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಯಾವೊಬ್ಬ ನಾಗರಿಕನ ಪೌರತ್ವವನ್ನು ಹರಣ ಮಾಡುವ ಉದ್ದೇಶ ಅಥವಾ ಕಾರ್ಯ ಈ ಕಾಯ್ದೆಯಲ್ಲಿಲ್ಲ. ವಿರೋಧ ಪಕ್ಷಗಳು ಜನರಲ್ಲಿ ಸುಳ್ಳು ಬಿಂಬಿಸಿ ರಾಜಕೀಯ ಲಾಭ ಪಡೆಯುವ ಗುರಿ ಹೊಂದಿವೆ. ಕಾಯ್ದೆಯಿಂದ ದೇಶದ ನಾಗರಿಕರು ಹೆದರುವ ಅಗತ್ಯವಿಲ್ಲ ಎಂದರು.

ನಿಕಟಪೂರ್ವ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ತಾಲೂಕು ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಮಾತನಾಡಿ, ಜನರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಮಹತ್ವದ ಅಂಶಗಳ ಕುರಿತು ತಪ್ಪು ಮಾಹಿತಿ ದೂರ ಮಾಡಿ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶಾದ್ಯಂತ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಹಣತೆಗಳಿಂದ ಸಿದ್ಧಪಡಿಸಿದ ಭಾರತ ನಕಾಶೆಗೆ ಭಾರತ ಮಾತೆ ವಂದನೆಯೊಂದಿಗೆ ಜನಜಾಗೃತಿ ಕಾರ್ಯಕ್ರಮ ಆರಂಭಗೊಂಡಿತು. ಪದಾಧಿಕಾರಿಗಳಾದ ಅಶೋಕ ಪ್ರಭು, ವಿಶ್ವನಾಥ ನಾಯ್ಕ, ತಿಮ್ಮಪ್ಪ ಮುಕ್ರಿ, ಪುರಸಭೆ ಸದಸ್ಯರಾದ ಸಂತೋಷ ನಾಯ್ಕ, ಮೋಹಿನಿ ಗೌಡ, ಪಲ್ಲವಿ ಮಡಿವಾಳ, ವಿನಾಯಕ ನಾಯ್ಕ, ಜಯಾ ಶೇಟ, ಶೈಲಾ ನಾಯ್ಕ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net