ಸಿಎಂಗೆ ದೈನೇಸಿ ಸ್ಥಿತಿ ಬರಬಾರದಿತ್ತು: ಸಂಸದ ಪ್ರತಾಪ ಸಿಂಹ ವಾಗ್ದಾಳಿ

Siddaramaiah and Prathap Simha
Published on

ಮೈಸೂರು: ಯಾವ ಕಾರಣಕ್ಕೆ ನನ್ನನ್ನು ಸೋಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಲಿ? ಕೆಲಸ ಮಾಡಿದವನನ್ನು ಸೋಲಿಸಬೇಕು ಅಂತಾ ಕೈ ಮುಗಿದು ಸಿಎಂ ಕೇಳಿದರೆ ಜನ ಒಪ್ಪುತ್ತಾರಾ ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು 40 ವರ್ಷಗಳ ರಾಜಕೀಯ ಜೀವನದಲ್ಲಿ ತಮ್ಮ ಕ್ಷೇತ್ರಕ್ಕೆ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದನ್ನು ಹೇಳಲಿ. ತಮ್ಮ ಬಾಂಧವರ (ಮುಸ್ಲಿಮರ) ಮುಂದೆ ಕೈಮುಗಿದು ನನ್ನ ಸೋಲಿಸಿ ಅಂತಾ ಕೇಳುವ ದೈನೇಸಿ ಸ್ಥಿತಿ ಮುಖ್ಯಮಂತ್ರಿಗೆ ಬರಬಾರದಿತ್ತು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಬೆಂಗಳೂರು-ಮೈಸೂರು ಹೈವೆ ಮಾಡಿಸಿದ್ದು ನನ್ನ ತಪ್ಪಾ? ಗ್ರೇಟರ್ ಮೈಸೂರು ಮಾಡಲು ಹೊರಟಿದ್ದು, ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲು ಹೊರಟಿದ್ದು, ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡುತ್ತಿರುವುದು ತಪ್ಪಾ ಎಂದರು.
ಉದಯಗಿರಿಯಲ್ಲಿ ತಮ್ಮ ಬಾಂಧವರ ಮುಂದೆ ಹೋಗಿ ಕೈ ಮುಗಿದು ನನ್ನ ಸೋಲಿಸಲು ಕರೆ ಕೊಟ್ಟಿದ್ದಾರೆ. ತಮ್ಮ ಬಾಂಧವರ ಉದ್ಧಾರಕ್ಕೆ ಮಾತ್ರ ಸಿದ್ದರಾಮಯ್ಯ ಇರೋದು ಎಂಬುದು ಎಲ್ಲರಿಗೂ ಗೊತ್ತಿದೆ. ಯಾವ ಬಡಾವಣೆಯಲ್ಲಿ ನಿಂತು ನನ್ನ ಸೋಲಿಸಿ ಅಂತಾ ಹೇಳಿದ್ದಾರೆ ಎಂಬುದು ನೋಡಿದೆ. ಅದೇ ಕುವೆಂಪುನಗರ, ಸರಸ್ವತಿಪುರಂ, ಸಿದ್ದಾರ್ಥ ಬಡಾವಣೆ ಸೇರಿದಂತೆ ಮೈಸೂರಿನ ಈ ಭಾಗದಲ್ಲಿ ಬಂದು ಈ ರೀತಿ ಹೇಳೋಕೆ ಆಗಲ್ಲ ಎಂದರು.
ಸಿದ್ದರಾಮಯ್ಯ ಅವರಿಗೆ ಬಡವರ ಮಕ್ಕಳ ಉದ್ಧಾರವಾಗಬಾರದು. ಬಡವರ ಮಕ್ಕಳು ಬೆಳೆಯಬಾರದು. ಅವರು, ಅವರ ಮಕ್ಕಳು ಮಾತ್ರ ರಾಜಕಾರಣ ಮಾಡುತ್ತಾ ಬೆಳೆಯುತ್ತಾ ಇರಬೇಕು ಅಷ್ಟೆ ಎಂದು ಟೀಕಿಸಿದರು.
ಟಿಪ್ಪು ಜಯಂತಿ ಮಾಡಿ ರಾಜ್ಯದ ಸೌಹಾರ್ದತೆ ಕೆಡಿಸಿದರು. ಮಹಿಷಾ ದಸರಾ ಆರಂಭ ಮಾಡಿ ಮೈಸೂರಿನ ಸ್ವಾಸ್ಥ್ಯ ಕೆಡಿಸಿದರು. ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಸಾಲು ಸಾಲು ಹಿಂದು ಕಾರ್ಯಕರ್ತನ ಕೊಲೆಯಾಯಿತು. ಇದಕ್ಕೆ ಯಾರು ಕಾರಣ? ಪ್ರತಿ ಬಾರಿಯೂ ಮೋದಿ ವಿರುದ್ಧ ಸಿದ್ದರಾಮಯ್ಯ ಮಾತಾಡುತ್ತಾರೆ. ಇದು ಒಂಥರ ಆಕಾಶದ ಕಡೆ ಮುಖ ಮಾಡಿ ಉಗಿದಂತೆ. ಈ ಕೆಲಸವನ್ನು ನಿರಂತರವಾಗಿ ಸಿದ್ದರಾಮಯ್ಯ ಮಾಡುತ್ತಲೆ ಇದ್ದಾರೆ ಎಂದರು.
ಬೃಹತ್ ಮೈಸೂರು ಪಾಲಿಕೆ ಮಾಡಬೇಕು ಎಂಬ ಕಡತ ಪಾಲಿಕೆ ಕೌನ್ಸಿಲ್ ಮುಂದಿದೆ. ಆದರೆ ಕೌನ್ಸಿಲ್ ಸಭೆಯನ್ನು ಸರ್ಕಾರ ದಿಢೀರ್ ರದ್ದುಗೊಳಿಸುವ ಮೂಲಕ ಬೃಹತ್ ಮೈಸೂರು ಪಾಲಿಕೆಗೆ ಕಾಂಗ್ರೆಸ್ ವಿರೋಧವಿದೆ ಎನ್ನುವುದನ್ನ್ನು ತೋರಿಸಿಕೊಟ್ಟಿದೆ. ಕಾಂಗ್ರೆಸ್‌ಗೆ ದಲಿತರು ಕೇರಿಯಲ್ಲೇ ಇರಬೇಕು. ಮುಸ್ಲಿಮರು ಮೊಹಲ್ಲಾದಲ್ಲೇ ಇರಬೇಕು. ನೀವುಗಳು ಮಾತ್ರ ವ್ಯವಸ್ಥಿತ ಬಡಾವಣೆಯಲ್ಲಿ ಇರಬೇಕಾ, ಮೈಸೂರು ಅಭಿವೃದ್ಧಿ ಮಾಡಬಾರದಾ? ಮೈಸೂರು ಅಭಿವೃದ್ಧಿ ಆಗಬಾರದಾ? ಎಂದು ವಾಗ್ದಾಳಿ ನಡೆಸಿದರು.
ಭಾಗ್ಯಗಳ ಕೊಟ್ಟಿದ್ದಾರೆ. ಇನ್ನು ಒಸಿ ಪ್ಯಾಕ್ ಕೊಡುವುದು ಮಾತ್ರ ಬಾಕಿ ಇದೆ. ಎಲ್ಲವನ್ನು ಕೊಟ್ಟು ಜನರನ್ನು ಅಲ್ಲೇ ಕೂರಿಸಿ, ಅಭಿವೃದ್ಧಿ ಆಗದಂತೆ ನೋಡಿಕೊಳ್ಳುತ್ತಿದ್ದೀರಾ? ನೀವಂತೂ ಮೈಸೂರು ಅಭಿವೃದ್ಧಿ ಮಾಡಲಿಲ್ಲ. ನಮಗಾದರೂ ಅಭಿವೃದ್ಧಿ ಮಾಡಲು ಬಿಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net