ಸಿಎಂಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ

14-pnp 1 A.L.Kempugowda
ಎ.ಎಲ್.ಕೆಂಪೂಗೌಡ
Published on

ಪಾಂಡವಪುರ: ಕಬ್ಬಿಗೆ ಬೆಲೆ ನಿಗದಿಗೊಳಿಸದೆ ರೈತರಿಗೆ ದ್ರೋಹ ಎಸಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜಿಲ್ಲಾ ಪ್ರವಾಸದ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ಕಬ್ಬು ಬೆಲೆ ನಿಗದಿಗಾಗಿ ರೈತ ಸಂಘದ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದಾಗ ರೈತ ಮುಖಂಡರನ್ನು ಮಾತುಕತೆಗೆ ಅಹ್ವಾನಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಕಬ್ಬಿಗೆ ಕನಿಷ್ಠ ಎಸ್‌ಎಪಿ ದರವನ್ನು ನಿಗದಿ ಮಾಡಿಲ್ಲ. ಕಬ್ಬಿನ ಇಳುವರಿಯನ್ನು 8.5ರಿಂದ 10.25ಕ್ಕೆ ಹೆಚ್ಚಿಸುವ ಮೂಲಕ ಕಾರ್ಖಾನೆ ಮಾಲೀಕರ ಪರವಾಗಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ. ಜನಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಡಿ.16ರಂದು ಪಾಂಡವಪುರ ಪಟ್ಟಣಕ್ಕೆ ಮುಖ್ಯಮಂತ್ರಿಗಳು ಆಗಮಿಸುವ ವೇಳೆ ಪ್ರತಿಭಟನೆ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

19ರಂದು ಮಂಡ್ಯ ಬಂದ್: ಕಳೆದ ಒಂದೂವರೆ ತಿಂಗಳಿನಿಂದ ಕಬ್ಬಿನ ದರ ನಿಗದಿಗಾಗಿ ರೈತ ಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ರೈತರ ಬೇಡಿಕೆಗಳಿಗೆ ಸ್ಪಂದಿಸದ ಬಿಜೆಪಿ ಸರ್ಕಾರ ರೈತರನ್ನು ಕಡೆಗಣಿಸಿ ಸಮಸ್ಯೆಗೆ ಪರಿಹಾರ ದೊರಕಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಡಿ.19ರಂದು ಮಂಡ್ಯ ನಗರ ಬಂದ್‌ಗೆ ಕರೆ ನೀಡಲಾಗಿದ್ದು, ಅಂದು ಬೆಳಗಿನಿಂದ ಮಧ್ಯಾಹ್ನದವರೆಗೆ ಸಂಪೂರ್ಣ ಬಂದ್ ಮಾಡಲಾಗುವುದು. ರೈತ ಸಂಘದ ಬಂದ್ ಕರೆಗೆ ವರ್ತಕರು ಒಪ್ಪಿಗೆ ಸೂಚಿಸಿದ್ದು, ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಬಂದ್ ಮಾಡಲಿದ್ದಾರೆ. ಜತೆಗೆ ದಲಿತ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿವೆ ಎಂದು ಹೇಳಿದರು.

ರೈತಸಂಘ ಹಿರಿಯ ಮುಖಂಡ ಕೆ.ಟಿ. ಗೋವಿಂದೇಗೌಡ, ಸಂಘದ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಕಾರ್ಯದರ್ಶಿ ವಿಜಯಕುಮಾರ್, ಅಮೃತಿ ರಾಜಶೇಖರ್, ಡಾಮಡಹಳ್ಳಿ ಸ್ವಾಮೀಗೌಡ, ಹಾರೋಹಳ್ಳಿ ಲಕ್ಷ್ಮೇಗೌಡ, ಬೇವಿನಕುಪ್ಪೆ ಯೋಗೇಶ್, ಕ್ಯಾತನಹಳ್ಳಿ ಮಹದೇವು, ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ರಘು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net