ಸಿಎಂ, ಸಚಿವರ ತೇಜೋವಧೆ ಮಾಡುತ್ತಿದ್ದವನ ಬಂಧನ

Published on

ಕೊರಟಗೆರೆ: ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ಸೇರಿ ರಾಜ್ಯ ಸರ್ಕಾರದ ವಿವಿಧ ಸಚಿವರನ್ನು ಅವಾಚ್ಯವಾಗಿ ನಿಂದಿಸಿ, ವೈಯಕ್ತಿಕ ತೇಜೋವಧೆ ಮಾಡುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಮೋಹಿತ್​ ನರಸಿಂಹಮೂರ್ತಿ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್​ ಮುಖಂಡರ ವಿವಿಧ ವಿರುದ್ಧ ಸದಾ ಕೆಂಡಕಾರುತ್ತಿದ್ದ ನೆಲಮಂಗಲ ತಾಲೂಕು ನಲೂರಿನ ಮೋಹಿತ್​ 1 ಹಾಗೂ 2 ನಿಮಿಷದ ಎರಡು ಪ್ರತ್ಯೇಕ ವಿಡಿಯೋ ಮಾಡಿ ಹರಿಬಿಟ್ಟಿದ್ದ.ಈ ಬಗ್ಗೆ ಕೊರಟಗೆರೆ ಠಾಣೆಯಲ್ಲಿ ಕೊರಟಗೆರೆ ಬ್ಲ್ಯಾಕ್​ ಕಾಂಗ್ರೆಸ್​ ಅಧ್ಯಕ್ಷ ಶಂಕರ್​ ದೂರು ನೀಡಿದ್ದರು. ಗೃಹ ಸಚಿವರ ವಿರುದ್ಧದ ಪೋಸ್ಟ್​ ಎಂಬ ಕಾರಣದಿಂದ ಪ್ರಕರಣವನ್ನುಗಂಭೀರವಾಗಿ ತೆಗೆದುಕೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಮೋಹಿತ್​ ನರಸಿಂಹಮೂರ್ತಿ ಪ್ರಸ್ತುತ ಉತ್ತರಾಖಂಡದ ಉಕ್ಕಿಮಠದಲ್ಲಿ ಬಿಜೆಪಿ ಸಂಘಟಕನಾದ್ದು, ಜೀವನಕ್ಕಾಗಿ ಟೀ ಅಂಗಡಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ರಾಜ್ಯ ಸರ್ಕಾರ ಮತ್ತು ಸಚಿವರ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡಿದ್ದ ಪರಿಣಾಮ ಕಾಂಗ್ರೆಸ್​ ಕಾರ್ಯಕರ್ತರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಪಿಐಗಳಾದ ಅವಿನಾಶ್​, ರಾಘವೇಂದ್ರ, ಪಿಎಸ್​ಐ ಚೇತನಗೌಡ, ಸಿಬ್ಬಂದಿ ದೊಡ್ಡಲಿಂಗಪ್ಪ, ಸಿದ್ದರಾಮ ಭಾಗವಹಿಸಿದ್ದರು.

ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರೋಪಿ!: 2024ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೋಹಿತ್​ ವಿರುದ್ಧ ರಾಜ್ಯದ 10 ಜಿಲ್ಲೆಗಳಲ್ಲಿ 15 ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೊರಟಗೆರೆ, ಮೈಸೂರು, ಕಲಬುರಗಿ, ಶಿವಮೊಗ್ಗ, ಬೆಳಗಾವಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಆರೋಪಿ ಮೊಹಿತ್​ ಮೇಲೆ ಭಾರತೀಯ ನಾಗರಿಕ ಸುರಕ್ಷಾ ಕಾಯ್ದೆಯಡಿ ಒಟ್ಟು 12ಪ್ರಕರಣ ದಾಖಲಾಗಿವೆ. ಇದಲ್ಲದೇ ಉತ್ತರಾಖಂಡದ ಚಾರದಾಮ ಯಾತ್ರೆ ಮಾಡಿಸುವ ಆಮಿಷವೊಡ್ಡಿ ಕರ್ನಾಟಕದ 10ಜನ ಭಕ್ತರಿಗೆ

ಪಂಗನಾಮ ಹಾಕಿರುವ ಹಿನ್ನೆಲೆಯಲ್ಲಿಯೂ 3 ಪ್ರಕರಣ ವಿವಿಧ ಠಾಣೆಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net