ಸಿಎಂ ವಿರುದ್ಧ ರಾಜಕೀಯ ಪಿತೂರಿ

00000
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಕುಗ್ಗಿಸಲು ರಾಜ್ಯಪಾಲರ ಮೂಲಕ ಪಿತೂರಿ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ದೂರಿದರು.
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಬೈಲನರಸಾಪುರದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 3.41 ಕೋಟಿ ರೂ. ವೆಚ್ಚದ ಮನೆ-ಮನೆಗೆ ನಲ್ಲಿ ಮೂಲಕ ನೀರು ಪೂರೈಕೆ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.ಬಿಜೆಪಿಯ ಕೋಮುವಾದದ ಬಗ್ಗೆ ಕೇಂದ್ರದಲ್ಲಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಹೋರಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಕೋಮುವಾದ ವಿರುದ್ಧ ದನಿ ಎತ್ತುವ ಗಟ್ಟಿ ದನಿಯ ಸಿದ್ದರಾಮಯ್ಯ ಅವರನ್ನು ಕುಗ್ಗಿಸಲು ರಾಜ್ಯಪಾಲರ ಅಧಿಕಾರವನ್ನೇ ದುರುಪಯೋಗ ಮಾಡಿಕೊಳ್ಳ ಲಾಗುತ್ತಿದೆ ಎಂದು ಆರೋಪಿಸಿದರು.

ಸ್ಪಷ್ಟ ಆರೋಪವೇ ಇಲ್ಲ: 136 ಜನಪ್ರತಿನಿಧಿಗಳು ಆಯ್ಕೆಯಾಗಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇವತ್ತಿನವರೆಗೂ ಸ್ಪಷ್ಟವಾಗಿ ಸಿದ್ದರಾಮಯ್ಯ ಅವರ ಮೇಲೆ ಏನು ಆಪಾದನೆ ಇದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಆರೋಪಗಳ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದರೂ, ಆರೋಪಗಳಿಗೆ ಯಾವುದೇ ಸಾಕ್ಷಿ ಆಧಾರ ಇಲ್ಲ ಎಂದರು. ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗಳ ಬೆನ್ನಿಗೆ ನಿಂತಿದ್ದು, ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ಪ್ರಮಯವೇ ಬರುವುದಿಲ್ಲ. ಅಂಥ ಸನ್ನಿವೇಶ ಕೂಡ ಇಲ್ಲ, ಯಾವುದೇ ಹಗರಣ ಇಲ್ಲ, ಪ್ರಕರಣ ಇಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಪುನರುಚ್ಚರಿಸಿದರು.


ಸತ್ಯದ ಪರ ಜಯ: ಡಿ.24ರಂದು ವರದಿ ಬರಲಿದ್ದು, ಆ ವರದಿಯಲ್ಲಿ ನಮಗೆ ನೂರಕ್ಕೆ ನೂರು ವಿಶ್ವಾಸವಿದೆ. ಸಿದ್ದರಾಮಯ್ಯ ಅವರು ಆರೋಪದಿಂದ ಮುಕ್ತರಾಗಿ ಹೊರಬರುತ್ತಾರೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು. ಇದು ಬಿಜೆಪಿ ಅವರಿಂದ ಮಸಿ ಬಳಿಯುವ ಷಡ್ಯಂತ್ರವಾಗಿದ್ದು, ಇದಕ್ಕೆ ಯಾವುದೇ ಫಲ ಸಿಗುವುದಿಲ್ಲ. ಸತ್ಯದ ಪರ ಜಯ ದೊರೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net